ಪ.ಬಂ.ಪಂಚಾಯತ್ ಚುನಾವಣೆಗಳು: ಹಿಂಸಾಚಾರ ಕುರಿತು ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳ ಕೆಸರೆರಚಾಟ

Photo: PTI
ಕೋಲ್ಕತಾ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗಳಲ್ಲಿ ಭಾರೀ ಪ್ರಮಾಣದ ಹಿಂಸಾಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದಿರಲು ಪ್ರಯತ್ನಿಸಿರುವ ಆಡಳಿತಾರೂಢ ಟಿಎಂಸಿ, ಹಿಂಸಾಚಾರಕ್ಕೆ ಪ್ರತಿಪಕ್ಷಗಳೇ ಕಾರಣವಾಗಿವೆ ಎಂದು ಶನಿವಾರ ಆರೋಪಿಸಿದೆ.
ತನ್ನ ನಾಯಕರ ಸರಣಿ ಟ್ವೀಟ್ ಗಳು ಮತ್ತು ಸಂದೇಶಗಳ ಮೂಲಕ ಟಿಎಂಸಿ, ಚುನಾವಣಾ ಸಂಬಂಧಿತ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ತನ್ನ ಪಕ್ಷಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದೆ.
‘ನಮ್ಮ ಹೆಸರನ್ನು ಕೆಡಿಸಲು ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್ ಪಂಚಾಯತ್ ಚುನಾವಣೆಯ ಕುರಿತು ಸುಳ್ಳು ಕಥನಗಳನ್ನು ಪ್ರಸಾರ ಮಾಡುತ್ತಿವೆ. ಮೃತಪಟ್ಟಿರುವ ಪೈಕಿ 27 ಜನರ ಪೈಕಿ 17 ಟಿಎಂಸಿ ಕಾರ್ಯಕರ್ತರಿದ್ದಾರೆ. ಈ ಎಲ್ಲ ಸಮಯದಲ್ಲಿ ಕೇಂದ್ರೀಯ ಪಡೆಗಳು ಮೌನವೀಕ್ಷಕರ ಪಾತ್ರವನ್ನು ವಹಿಸಿದ್ದವು ’ ಎಂದು ಟಿಎಂಸಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ಟ್ವೀಟಿಸಿದೆ.
ಪ.ಬಂಗಾಳ ಪಂಚಾಯತ್ ಚುನಾವಣೆಗಳಿಗಾಗಿ ಜೂ.8ರಂದು ನಾಮಪತ್ರಗಳ ಸಲ್ಲಿಕೆ ಆರಂಭಗೊಂಡಾಗಿನಿಂದ ಮತದಾನದ ದಿನ 12 ಜನರು ಸೇರಿದಂತೆ ಕನಿಷ್ಠ 30 ಸಾವುಗಳು ವರದಿಯಾಗಿವೆ.
ವಿರೋಧ ಪಕ್ಷಗಳು ಹಿಂಸಾಚಾರದ ಹರಡುವಿಕೆಯಲ್ಲಿ ತೊಡಗಿಕೊಂಡಿವೆ ಎಂದು ಹೇಳಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು, ಹಿಂಸಾಚಾರದ ಹಿಂದೆ ಆಡಳಿತಾರೂಢ ಪಕ್ಷದ ಕೈವಾಡವಿದ್ದಿದ್ದರೆ ಸತ್ತವರಲ್ಲಿ ಅದರ ಬೆಂಬಲಿಗರು ಏಕೆ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಘೋಷ್ ಅವರ ಅಭಿಪ್ರಾಯವನ್ನು ಪ್ರತಿಧ್ವನಿಸಿರುವ ರಾಜ್ಯದ ಸಚಿವರಾದ ಶಶಿ ಪಾಂಜಾ ಮತ್ತು ಬೃತ್ಯ ಬಸು ಅವರು, ಪ್ರತಿಪಕ್ಷಗಳ ಹಿಂಸಾಚಾರಕ್ಕೆ ಟಿಎಂಸಿ ಗುರಿಯಾಗಿದೆ ಎಂದಿದ್ದಾರೆ.
‘ಕೇವಲ 8-9 ಮತಗಟ್ಟೆಗಳಲ್ಲಿ ಗಂಭೀರ ಘಟನೆಗಳು ನಡೆದಿವೆ. ಪ್ರತಿಪಕ್ಷಗಳು ಕೇಂದ್ರೀಯ ಪಡೆಗಳ ಉಪಸ್ಥಿತಿಯನ್ನು ಆಗ್ರಹಿಸಿದ್ದವು, ಆದರೆ ಚುನಾವಣೆಯಲ್ಲಿ ಈ ಪಡೆಗಳ ಪಾತ್ರವನ್ನು ನಾವು ಪ್ರಶ್ನಿಸುವ ಅಗತ್ಯವಿದೆ. ಬಿಎಸ್ಎಫ್ ಮತ್ತು ಕೇಂದ್ರೀಯ ಪಡೆಗಳು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದವು ಎನ್ನುವುದು ನಮಗೆ ತಿಳಿದುಬಂದಿದೆ ’ ಎಂದು ಹೇಳಿರುವ ಪಾಂಜಾ, 61,539 ಮತಗಟ್ಟೆಗಳ ಪೈಕಿ ಸುಮಾರು 60 ಮತಗಟ್ಟೆಗಳಲ್ಲಿ ಮಾತ್ರ ತೊಂದರೆಗಳು ಉಂಟಾಗಿದ್ದವು ಎಂದು ಬೆಟ್ಟು ಮಾಡಿದ್ದಾರೆ. ರಾಜ್ಯದಲ್ಲಿ ಪಂಚಾಯತ್ ಚುನಾವಣೆ ಒಂದು ಪ್ರಹಸನವಾಗಿ ಮಾರ್ಪಟ್ಟಿದೆ ಎಂದು ಪ್ರತಿಪಕ್ಷಗಳು ಹೇಳಿವೆ.
ಮತಗಟ್ಟೆಗಳ ಹೊರಗೆ ಎಸೆಯಲಾಗಿದ್ದ ಮತಪೆಟ್ಟಿಗೆಗಳ ವೀಡಿಯೊಗಳನ್ನು ಶೇರ್ ಮಾಡಿಕೊಂಡಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಸಲೀಂ ಅವರು, ‘ಮತದಾನ ಮುಗಿದಿದೆ. ಇದು ಮತಗಟ್ಟೆಯೊಂದರಲ್ಲಿ ಮತಪತ್ರಗಳು ಮತ್ತು ಮತಪೆಟ್ಟಿಗೆಗಳ ಸ್ಥಿತಿ. ಇದು ಡೈಮಂಡ್ ಹಾರ್ಬರ್ನ ಚಿತ್ರವಾಗಿದೆ. ‘ಭೇಪೋನ್ ಯಾತ್ರಾ’ ಸಂದರ್ಭದಲ್ಲಿ ಪ.ಬಂ.ಪೊಲೀಸರ ಕೃಪಾಶ್ರಯದಲ್ಲಿ ಅಭ್ಯಾಸ ಮಾಡಿದ್ದನ್ನು ಟಿಎಂಸಿ ನಿಖರವಾಗಿ ಕಾರ್ಯಗತಗೊಳಿಸಿದೆ ಎಂದು ಟ್ವೀಟಿಸಿದ್ದಾರೆ.
ಮತದ ಹೆಸರಿನಲ್ಲಿ ಲೂಟಿ ನಡೆದಿತ್ತು ಎಂದು ಟ್ವೀಟಿಸಿರುವ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸುವೇಂದು ಅಧಿಕಾರಿಯವರು,ರಾಜ್ಯದಲ್ಲಿ ಸಂವಿಧಾನದ ವಿಧಿ 355 ಅಥವಾ 356ನ್ನು ಹೇರಲು ಆಗ್ರಹಿಸಿದ್ದಾರೆ. ಇಂತಹ ಪ್ರಹಸನದ ಚುನಾವಣೆಗಳಿಂದ ಆಯ್ಕೆಯಾಗುವ ಪಂಚಾಯತ್ಗಳು ಕಾನೂನುಬಾಹಿರವಾಗುತ್ತವೆ ಮತ್ತು ಅವುಗಳಿಗೆ ಕೇಂದ್ರೀಯ ಹಣಕಾಸನ್ನು ಒದಗಿಸಬಾರದು ಎಂದು ಅವರು ಹೇಳಿದ್ದಾರೆ.
ಚುನಾವಣೆಗಳಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಪ.ಬಂ.ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧುರಿ ಆರೋಪಿಸಿದ್ದಾರೆ.







