ನಿರಾಶ್ರಿತರ ಕಲ್ಯಾಣಕ್ಕಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ ಎಸ್.ಜಿ. ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ

ಡಾ. ಎಸ್.ಜಿ. ಸುಶೀಲಮ್ಮ
ಬೆಂಗಳೂರು: ಇಲ್ಲಿನ ಆರ್.ಟಿ.ನಗರದ ನಿವಾಸಿಯಾದ ಡಾ.ಎಸ್.ಜಿ. ಸುಶೀಲಮ್ಮ ಅವರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಮಹಿಳಾ ಸಬಲೀಕರಣ, ಶಿಶು ಸಂರಕ್ಷಣೆ, ಬಡವರ ಹಾಗೂ ನಿರಾಶ್ರಿತರ ಕಲ್ಯಾಣಕ್ಕಾಗಿ ದಶಕಗಳ ಕಾಲ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಗುರುತಿಸಿ ಕೇಂದ್ರ ಸರಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
1939ರ ಮೇ 24ರಂದು ನಗರದಲ್ಲಿ ಜನಿಸಿದ ಡಾ. ಎಸ್.ಜಿ. ಸುಶೀಲಮ್ಮ ಅವರು 1959ರಿಂದ 1967ರವರೆಗೆ ಕಾರ್ಖಾನೆಯೊಂದರಲ್ಲಿ 15 ವರ್ಷ ಸೇವೆ ಸಲ್ಲಿಸಿದರು. 1963ರಲ್ಲಿ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಸಮಾಜಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದರು. ಅವರು 1974ರಿಂದ 1978ರವರೆಗೆ ಭುವನೇಶ್ವರಿ ಮಹಿಳಾ ಮಂಡಳಿಯಲ್ಲಿ ವಾರ್ಡನ್ ಆಗಿ ಕಾರ್ಯನಿರ್ವಹಿಸಿದ್ದಾರೆ.
1975ರಲ್ಲಿ ಹೆಬ್ಬಾಳದ ಸಮೀಪದ ಚೋಳನಾಯಕನಹಳ್ಳಿಯಲ್ಲಿ ಬಡವರು, ಅನಾಥರು, ನಿರಾಶ್ರಿತ ಮಕ್ಕಳು ಮತ್ತು ಮಹಿಳೆಯರ ಸೇವೆಗಾಗಿ ಸುಮಂಗಲಿ ಸೇವಾ ಆಶ್ರಮವನ್ನು ಸ್ಥಾಪಿಸಿದರು. 1976ರಲ್ಲಿ ಬಸವಾನಂದ ನರ್ಸರಿ, 1979ರಲ್ಲಿ ಸುಮಂಗಲಿ ಯುವತಿ ಮಂಡಳಿ ಹಾಗೂ 1985ರಲ್ಲಿ ಚೋಳನಾಯಕನಹಳ್ಳಿಯಲ್ಲಿ ಬಸವಾನಂದ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿ ಶಿಕ್ಷಣ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದರು.
ಪ್ರಾರಂಭದಿಂದ ಸುಮಂಗಲಿ ಸೇವಾಶ್ರಮದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿರುವ ಎಸ್.ಜಿ.ಸುಶೀಲಮ್ಮ 1987ರಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಮಹಿಳಾ ಮಂಡಲದ ಒಕ್ಕೂಟದ ಅಧ್ಯಕ್ಷರಾಗಿ ಮತ್ತು ಜಾಲಹಳ್ಳಿಯ ಸಮೂಹ ಸಾಮಾಜಿಕ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ, 1989ರಲ್ಲಿ ಬೆಂಗಳೂರು ನಗರ ಜಿಲ್ಲಾ ಮಹಿಳಾ ಮಹಾಮಂಡಲದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
1990ರಲ್ಲಿ ದೊಡ್ಡಬಳ್ಳಾಪುರದ ಸದ್ಗುರು ಅಮರಜ್ಯೋತಿ ವಿಶ್ವಕುಂಡಲ ಯೋಗ ಆಶ್ರಮದ ಅಧ್ಯಕ್ಷರಾಗಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಬಹೋಪಯೋಗಿ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗೂ ಅನೇಕ ಸಂಘ-ಸಂಸ್ಥೆಗಳಿಗೆ ಪದಾಧಿಕಾರಿಗಳಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ.
ಡಾ. ಸುಶೀಲಮ್ಮ ಅವರು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಮಹಿಳಾ ಒಕ್ಕೂಟಗಳ ರಚನೆ, ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಗಳು ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇವರ ಸೇವಾ ಕಾರ್ಯಗಳಿಂದ ಸಾವಿರಾರು ಮಹಿಳೆಯರು ಮತ್ತು ಮಕ್ಕಳು ಹೊಸ ಬದುಕಿನ ದಾರಿಯನ್ನು ಕಂಡಿದ್ದಾರೆ.







