ದೇವನೂರು ಮಹಾದೇವ ಅವರಿಗೆ ʼಪಂಪ ಪ್ರಶಸ್ತಿʼ

ದೇವನೂರು ಮಹಾದೇವ/ಎಸ್.ಜಿ.ಸಿದ್ದರಾಮಯ್ಯ/ಕೆ.ನೀಲಾ
ಬೆಂಗಳೂರು : ರಾಜ್ಯ ಸರಕಾರದ 2025-26ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ , ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ, ಕಲಾ ಪ್ರಶಸ್ತಿ ಮತ್ತು ಸಂಗೀತ ನೃತ್ಯ ವಿಭಾಗದ ಪ್ರಶಸ್ತಿಗಳಿಗೆ ಹಲವು ಸಾಧಕರನ್ನು ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಪ್ರಶಸ್ತಿ ವಿಭಾಗದಲ್ಲಿ ʼಬಸವ ರಾಷ್ಟ್ರೀಯ ಪುರಸ್ಕಾರʼಕ್ಕೆ ಸಿದ್ಧರಾಮ ಶರಣರು ಬೆಲ್ದಾಳ ಆಯ್ಕೆಯಾಗಿದ್ದರೆ, ʼಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿʼಗೆ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಭಾಜನರಾಗಿದ್ದಾರೆ.
ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗದಲ್ಲಿ ಸಿದ್ದನಗೌಡ ಪಾಟೀಲ್ಗೆ ʼಸಂಗೊಳ್ಳಿ ರಾಯಣ್ಣ ಪ್ರಶಸ್ತಿʼ, ಕೆ.ನೀಲಾ ಅವರಿಗೆ ʼಅಕ್ಕಮಹಾದೇವಿ ಪ್ರಶಸ್ತಿʼ, ಎಸ್.ಜಿ.ಸಿದ್ದರಾಮಯ್ಯ ಅವರಿಗೆ ʼಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿʼಗೆ ಆಯ್ಕೆಯಾಗಿದ್ದಾರೆ.
ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ ವಿಭಾಗದಲ್ಲಿ ʼಪಂಪ ಪ್ರಶಸ್ತಿʼಗೆ ದೇವನೂರು ಮಹಾದೇವ, ʼಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿʼಗೆ ಅಲ್ಲಾಬಕ್ಷ ಮೀರಾಸಾಹೇಬ ಮಿರ್ಜಿ, ʼದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿʼಗೆ ಡಾ.ಸುಕನ್ಯಾ ಮಾರುತಿ, ʼಡಾ.ಗುಬ್ಬಿ ವೀರಣ್ಣ ಪ್ರಶಸ್ತಿʼಗೆ ಜಿ.ವಿ.ಶಾರದಾ, ʼಬಿ.ವಿ.ಕಾರಂತ ಪ್ರಶಸ್ತಿʼಗೆ ಪ್ರಸನ್ನ, ʼಡಾ.ಸಿದ್ಧಲಿಂಗಯ್ಯ ಸಾಹಿತ್ಯ ಪ್ರಶಸ್ತಿʼಗೆ ಗಂಗಾರಾಮ ಚಂಡಾಳ ಭಾಜನರಾಗಿದ್ದಾರೆ.
ಕಲಾ ಪ್ರಶಸ್ತಿ ವಿಭಾಗದಲ್ಲಿ ʼವರ್ಣ ಶಿಲ್ಪಿ ವೆಂಕಟಪ್ಪ ಪ್ರಶಸ್ತಿʼಗೆ ವಿ.ಹರಿರಾಮ್, ʼಜಕಣಾಚಾರಿ ಪ್ರಶಸ್ತಿʼಗೆ ಅಶೋಕ್ ಗುಡಿಗಾರ್, ʼಜಾನಪದ ಶ್ರೀ ಪ್ರಶಸ್ತಿʼಗೆ ಎಂ.ಮಹದೇವಸ್ವಾಮಿ ಹಾಗೂ ಬಿ.ಲಕ್ಷಣ ಆಯ್ಕೆಯಾಗಿದ್ದಾರೆ. ಸಂಗೀತ ನೃತ್ಯ ಪ್ರಶಸ್ತಿ ವಿಭಾಗದಲ್ಲಿ ʼಕುಮಾರವ್ಯಾಸ ಪ್ರಶಸ್ತಿʼಗೆ ಕಲ್ಲಿನಾಥಶಾಸ್ತ್ರಿ, ʼಶಾಂತಲಾ ನಾಟ್ಯ ರಾಣಿ ಪ್ರಶಸ್ತಿʼಗೆ ಪ್ರತಿಭಾ ಪ್ರಹ್ಲಾದ್ ಭಾಜನರಾಗಿದ್ದಾರೆ.






