ಸಂಸತ್ ಭಾರೀ ಭದ್ರತಾ ವೈಫಲ್ಯ; ಕಾಂಗ್ರೆಸ್ ಸಂಸದರು ಪಾಸ್ ವಿತರಿಸಿದ್ದರೆ ನೀವು ಏನೆಲ್ಲಾ ಮಾಡುತ್ತಿದ್ದಿರಿ: ಡಿ.ಕೆ.ಶಿವಕುಮಾರ್ ಪ್ರಶ್ನೆ

ಬೆಳಗಾವಿ: “ಸಂಸತ್ತಿನಲ್ಲಿ ಭಾರೀ ಭದ್ರತಾ ವೈಫಲ್ಯಕ್ಕೆ ಕಾರಣವಾಗಿರುವವರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಪಾಸ್ ವಿತರಣೆ ಮಾಡಿದ್ದು, ಒಂದು ವೇಳೆ ಕಾಂಗ್ರೆಸ್ ಸಂಸದರು ಪಾಸ್ ವಿತರಣೆ ಮಾಡಿದ್ದರೆ ನೀವು ಏನೆಲ್ಲಾ ಮಾಡುತ್ತಿದ್ದಿರಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು.
ಸಂಸತ್ತಿನ ಲೋಕಸಭೆ ಕಲಾಪದ ವೇಳೆ ಆಗುಂತಕರು ಬುಧವಾರ ದಾಳಿ ಮಾಡಿ ಟಿಯರ್ ಗ್ಯಾಸ್ ಸ್ಫೋಟಿಸಿದ ವಿಚಾರವಾಗಿ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಈ ವಿಚಾರವಾಗಿ ನನಗೆ ಕರೆಗಳು ಬರುತ್ತಿವೆ. ಈಗ ಪ್ರತಾಪ್ ಸಿಂಹ ಅವರ ಹೆಸರು ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಅವರು ಬಹಳ ಬುದ್ಧಿವಂತರು. ಪಾಸ್ ಗಳನ್ನು ನೀಡುವಾಗ ಪರಿಶೀಲನೆ ಮಾಡುವುದು ಸಹಜ. ಇಂತಹ ಪರಿಸ್ಥಿತಿಯಲ್ಲಿ ಸಂಸದರು ಅವರಿಗೆ ಯಾಕೆ ಪಾಸ್ ಕೊಟ್ಟರೋ ಗೊತ್ತಿಲ್ಲ“ ಎಂದರು.
ನಾನು ಟಿವಿಯಲ್ಲಿ ನೋಡಿದಾಗ ವೀಕ್ಷಕರ ಗ್ಯಾಲರಿಯಿಂದಲೇ ಜಿಗಿದು ನುಗ್ಗಿದ್ದಾರೆ. ಸಂಸದರು ಬಚ್ಚಿಟ್ಟುಕೊಳ್ಳುವಂತಾಗಿದೆ. ವಿರೋಧ ಪಕ್ಷದ ನಾಯಕರು ಇದರ ಹೊಣೆಹೊತ್ತು ಅದೇನು ಬುದ್ಧಿವಾದ ಹೇಳುತ್ತಾರೋ ಹೇಳಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಅವರು ಈ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು “ಇದು ಸಂಸತ್ತಿನ ಭದ್ರತೆ ವಿಚಾರ. ಇದನ್ನು ನಾವು ಮಾಡಿದರೇನು, ನೀವು ಮಾಡಿದರೇನು? ಈ ವಿಚಾರದಲ್ಲಿ ನಿಮ್ಮ ನಿಲುವೇನು ಎಂದು ಕೇಳುತ್ತಿದ್ದೇವೆ. ನಿಮ್ಮ ನಿಲುವನ್ನು ನಿಮಗೆ ಬಿಟ್ಟಿದ್ದೇವೆ. ಈ ಘಟನೆ ಖಂಡಿಸುವ ನಿಲುವಳಿ ಸೂಚನೆಯನ್ನು ಪ್ರಸ್ತಾಪಿಸಬೇಕು. ಒಂದು ವೇಳೆ ನಾವು ಆ ಪಾಸನ್ನು ಕೊಟ್ಟಿದ್ದರೆ ನಮ್ಮ ವಿರುದ್ಧ ಏನೆಲ್ಲಾ ಟೀಕೆ ಮಾಡುತ್ತಿದ್ದಿರಿ?” ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಸುರೇಶ್ ಕುಮಾರ್, ಈ ವಿಚಾರವಾಗಿ ಎಲ್ಲರೂ ಖಂಡನೆ ಮಾಡುತ್ತಿರುವಾಗ ಶಿವಕುಮಾರ್ ಅವರು ಪ್ರತಾಪ್ ಸಿಂಹ ಅವರ ವಿಚಾರ ಮಾತನಾಡಬಾರದಿತ್ತು ಎಂದರು.







