ಮಹಿಳೆಯರ ಶಾಪ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ತಟ್ಟದೇ ಬಿಡುವುದಿಲ್ಲ: ಆರ್. ಅಶೋಕ್

Photo source: X/@RAshokaBJP
ಬೆಂಗಳೂರು: ಮಹಿಳಾ ಮೀಸಲು ಮಸೂದೆ ತಡೆವೊಡ್ಡಿದ ಕಾಂಗ್ರೆಸ್ ಕೋಟ್ಯಂತರ ಮಹಿಳೆಯರಿಗೆ ದ್ರೋಹ ಬಗೆದಿದೆ. ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಅನ್ನು ದೇಶದ ಜನ ಕ್ಷಮಿಸುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸಲಿದ್ದಾರೆ ಎಂದು ವಿಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಸಿದ್ದಾರೆ.
ಶನಿವಾರ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹಿಳಾ ಮೀಸಲು ಮಸೂದೆಗೆ ಸೋಲಾಗಿದ್ದು ಸಾಮಾನ್ಯ ವಿಚಾರ ಅಲ್ಲ. ದೇಶದ ಇತಿಹಾಸದಲ್ಲೇ ಮಹಿಳೆಯರಿಗೆ ಅವರ ಹಕ್ಕನ್ನು ಸಂವಿಧಾನದತ್ತವಾಗಿ ಕೊಡುವ ತೀರ್ಮಾನವನ್ನು ಮೋದಿ ಮಾಡಿದ್ದರು. ಆದರೆ, ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡದೆ ಕೋಟ್ಯಂತರ ಮಹಿಳೆಯರ ಕನಸುಗಳ ಮೇಲೆ ಹೊಡೆತ ನೀಡಿತು. ಇದು ಕೇವಲ ಮಸೂದೆ ವಿಫಲತೆ ಅಲ್ಲ ಎಂದು ವಿವರಿಸಿದರು.
ಮಹಿಳಾ ಮೀಸಲು ಮಸೂದೆ ಸರ್ವಾನುಮತದಿಂದ ಬೆಂಬಲ ಸಿಗಬೇಕಿತ್ತು. ಆದರೆ ಬೆಂಬಲ ನೀಡದೆ ವಿಧಾನಸಭೆಗೆ, ಸಂಸತ್ತಿಗೆ ಹೋಗುತ್ತೇವೆಂಬ ಮಹಿಳೆಯರ ಕನಸನ್ನು ನುಚ್ಚು ನೂರು ಮಾಡಿದೆ. ಮಹಿಳೆಯರ ಶಾಪ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ತಟ್ಟದೇ ಬಿಡುವುದಿಲ್ಲ. 70 ವರ್ಷಗಳಿಂದ ಅಧಿಕಾರ ನಡೆಸಿದ ಕಾಂಗ್ರೆಸ್, ಮಹಿಳೆಯ ಹಕ್ಕಿನ ಬಗ್ಗೆ ವೇದಿಕೆಗಳಲ್ಲಿ ಭಾಷಣ ಮಾಡಿತು. ಆದರೆ ಕಾರ್ಯರೂಪಕ್ಕೆ ತರಲಿಲ್ಲ. ಆದುದರಿಂದ ಮಹಿಳಾ ಕಾಂಗ್ರೆಸ್ ಘಟಕವನ್ನು ರದ್ದು ಮಾಡಿ ಎಂದು ವರು ಸಲಹೆ ನೀಡಿದರು.
ಉಚಿತ ಬಸ್ ಟಿಕೆಟ್ ಕೊಟ್ಟರೆ ಸಾಕೇ..: ‘ಮಹಿಳೆಯರಿಗೆ 2 ಸಾವಿರ ರೂ. ನಗದು, ಉಚಿತ ಬಸ್ ಟಿಕೆಟ್ ಕೊಟ್ಟರೆ ಸಾಕೇ.. ಅವರು ಮನೆಯಲ್ಲೇ ಇರುತ್ತಾರೆ, ಅಡಿಗೆ ಮಾಡಿಕೊಂಡು, ದೇವಸ್ಥಾನಕ್ಕೆ ತಿರುಗಿಕೊಂಡು ಇರಬೇಕೇ?, ಅವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬಾರದೇ?. ಅವರು ಸಂಸತ್, ವಿಧಾನಸಭೆಗೆ ಹೋಗುವುದು ಬೇಡವೇ?. ಮಹಿಳೆಯರ ಮೀಸಲಾತಿ ಕಸಿದ ದ್ರೋಹಿಗಳು ಕಾಂಗ್ರೆಸ್ಸಿಗರು ಎಂದು ಟೀಕಿಸಿದರು.
ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಕ್ಷೇತ್ರಗಳು ಸಿಗುವಂತೆ ಮಾಡಲು ಅವಕಾಶ ಇತ್ತು. ಆದರೆ ಕಾಂಗ್ರೆಸ್ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದರು. ಈ ಬಗ್ಗೆ ಚರ್ಚೆ ಮಾಡಬಹುದಿತ್ತು. ಹಿಂದೆ ಹಲವು ಬಾರಿ ಕ್ಷೇತ್ರ ಮರುವಿಂಗಡಣೆ ಆದಾಗ ಅವರು ವಿರೋಧಿಯಲ್ಲ್ಲ. ಇದೇ ಮೊದಲ ಬಾರಿಗೆ ಆಗಿಲ್ಲ. ಆಗಲೂ ಸಂಸತ್ ಸೀಟು ಹೆಚ್ಚಳ ಆಗಿದೆ. ಆಗ ಇವರು ಬಾಯಿಗೆ ಬಟ್ಟೆ ತುರುಕಿಕೊಂಡಿದ್ದರೇ? ಎಂದು ಪ್ರಶ್ನಿಸಿದರು.
ಉಪಚುನಾವಣೆ ಬೆನ್ನಲ್ಲೇ ವಿದ್ಯುತ್ ಬೆಲೆ ಏರಿಕೆ ಮಾಡಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಬರುವ ಮೊದಲು ಸಾಲು-ಸಾಲು ತೆರಿಗೆ ಹೊರೆ ಹೊರಲು ಜನ ಸಿದ್ಧರಾಗಬೇಕಿದೆ. ನೌಕರರಿಗೆ ವೇತನ ಕೊಡಲೂ ಹಣವಿಲ್ಲ. ನಷ್ಟ ಭರಿಸಲು ಬೆಲೆ ಏರಿಕೆ ಮಾಡುತ್ತಲೇ ಇರುತ್ತಾರೆ. ಸೋಲಿನ ಕರಿನೆರಳಿನ ಹಿನ್ನೆಲೆಯಲ್ಲಿ ಬೆಂಗಳೂರು ಚುನಾವಣೆ ಮಾಡುವುದು ಸಂಶಯ ಎಂದು ಅವರು ವಾಗ್ದಾಳಿ ನಡೆಸಿದರು.






