ಕಾಂಗ್ರೆಸ್ಗೆ ಶೇ. 80ರಷ್ಟು ಮತ ಚಲಾಯಿಸಿದವರು ಮುಸ್ಲಿಮರು; ಲಿಂಗಾಯತರದ್ದು ಕೇವಲ ಶೇ. 20ರಷ್ಟು ಮಾತ್ರ: MLC ಪ್ರಕಾಶ್ ರಾಠೋಡ್

ಶಾಮನೂರು ಶಿವಶಂಕರಪ್ಪ | ಪ್ರಕಾಶ್ ರಾಠೋಡ್
ಬೆಂಗಳೂರು: ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಸ್ವಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿದ ಅವರು, ʼʼಶಾಮನೂರು ಅವರ ಹೇಳಿಕೆ ನನಗೆ ಅತೀವ ನೋವು ತಂದಿದೆʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ʼʼಸಮೀಕ್ಷೆಯೊಂದರ ಪ್ರಕಾರ ಕಾಂಗ್ರೆಸ್ ಪರವಾಗಿ ಅತ್ಯಧಿಕ ಅಂದರೆ ಶೇಕಡಾ 80 ರಷ್ಟು ಮತ ಚಲಾಯಿಸಿದವರು ಮುಸ್ಲಿಮರು. ಅದಕ್ಕೆ ಹೋಲಿಸಿದರೆ ಲಿಂಗಾಯತರ ಕಡೆಯಿಂದ ಕಾಂಗ್ರೆಸ್ಗೆ ಬಂದಿರುವ ಮತಗಳು ಕೇವಲ ಶೇಕಡಾ 20ರಷ್ಟು ಮಾತ್ರ. ಇಷ್ಟಿದ್ದರೂ ರಾಜ್ಯ ಸಂಪುಟದಲ್ಲಿ ಲಿಂಗಾಯತರಿಗೆ 7 ಸ್ಥಾನಗಳನ್ನು ನೀಡಲಾಗಿದೆ." ಎಂದು ವಿವರಿಸಿದ್ದಾರೆ.
"ಮುಸ್ಲಿಂ ಸಮುದಾಯವರಿಗೆ ಕೇವಲ 2 ಸ್ಥಾನಗಳನ್ನು ಮಾತ್ರ ನೀಡಲಾಗಿದೆ. ಲಂಬಾಣಿ ಸಮುದಾಯವು ಶೇ.80ರಷ್ಟು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಪ್ರಮುಖ ಪಾತ್ರ ವಹಿಸಿದೆ. ಆದರೂ ಲಂಬಾಣಿ ಸಮುದಾಯದವರಿಗೆ ಮಂತ್ರಿಸ್ಥಾನ ಸಿಕ್ಕಿಲ್ಲ. ಉಪ್ಪಾರ, ಬಲಜಿಗ ಹಾಗೂ ಯಾದವ ಸಮುದಾಯಕ್ಕೂ ಸಹಾ ಮಂತ್ರಿಸ್ಥಾನ ನೀಡಿಲ್ಲ. ಈ ಎಲ್ಲಾ ಸಮುದಾಯದ ಮುಖಂಡರು ಪಕ್ಷದ ಒಳಗಡೆ ಶಿಸ್ತಿನಿಂದ ತಮ್ಮ ಬೇಡಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ, ಕೆ.ಪಿ.ಸಿ.ಸಿ ಅಧ್ಯಕ್ಷರಿಗೆ ಮತ್ತು ಎಐಸಿಸಿ ಮುಖಂಡರುಗಳಿಗೆ ಮನವಿ ಮಾಡಿದ್ದಾರೆ." ಎಂದು ತಿಳಿಸಿದ್ದಾರೆ.
"ಸಿಎಂ ಸಿದ್ದರಾಮಯ್ಯನವರು ಬಸವ ತತ್ವ ಸಿದ್ಧಾಂತದ ಅನುಯಾಯಿಗಳಾಗಿದ್ದು, ಅದರಂತೆ ಎಲ್ಲಾ ಸಮುದಾಯ ಹಾಗೂ ಎಲ್ಲಾ ವರ್ಗಗಳಿಗೂ ಪ್ರಾತಿನಿದ್ಯ ನೀಡಿ, ಕಾಂಗ್ರೆಸ್ ತತ್ವ ಸಿದ್ಧಾಂತಕ್ಕೆ ಚ್ಯುತಿ ಬರದಂತೆ ಎಲ್ಲರಿಗೂ ಸಮಪಾಲು, ಸಮಬಾಳು ಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ನಾವೆಲ್ಲರು ಕರ್ನಾಟಕದಿಂದ ದೇಶಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೇವೆ. ಹಾಗೂ ನುಡಿದಂತೆ ನಡೆದಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 28 ಲೋಕಸಭಾಕ್ಷೇತ್ರಗಳಲ್ಲಿ ಗೆಲ್ಲುವಂತಹ ವಾತಾವರಣ ಸೃಷ್ಟಿಯಾಗಿವೆ" ಎಂದು ಕಾಶ್ ರಾಠೋಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.







