ಪ್ರಾಸಿಕ್ಯೂಷನ್‌ಗೆ ಅನುಮತಿ | ರಾಜ್ಯಪಾಲರು ರಾಜಕೀಯ ಕಾರಣಕ್ಕೆ ಇದನ್ನೆಲ್ಲ ಮಾಡುತ್ತಿದ್ದಾರೆ : ಜಿ.ಪರಮೇಶ್ವರ್

ಬೆಂಗಳೂರು : ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಪ್ರಕ್ರಿಯೆ ಅಚ್ಚರಿ ತಂದಿದ್ದು, ಉದ್ದೇಶಪೂರ್ವಕವಾಗಿ ಅನುಮತಿ ಕೊಟ್ಟಿದ್ದಾರೆಂದು ಆಡುವ ಮಕ್ಕಳಿಗೂ ಗೊತ್ತಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ರವಿವಾರ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯಪಾಲರು ರಾಜಕೀಯ ಕಾರಣಕ್ಕೆ ಇದನ್ನೆಲ್ಲ ಮಾಡುತ್ತಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ಸಹ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಕಾನೂನು ಹಾಗೂ ರಾಜಕೀಯ ಹೋರಾಟ ಮಾಡಲು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದರು.
ಜಿಲ್ಲೆ, ತಾಲೂಕುಗಳಲ್ಲಿ ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಬಂದಿದೆ. ಅವರಿಗೆ ರಾಜಕೀಯ ಉತ್ತರ ಕೊಡಲು ರಾಜಕೀಯ ಹೋರಾಟವೇ ಮಾಡಬೇಕು. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷರು ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಮುಡಾ ತನಿಖೆಯನ್ನು ನ್ಯಾಯಾಲಯವು ಯಾರಿಗೆ ನೀಡುತ್ತದೆಯೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಇರುವ ಆಯ್ಕೆ ಲೋಕಾಯುಕ್ತ ಮಾತ್ರ. ಲೋಕಾಯುಕ್ತದಲ್ಲೇ ಅರ್ಜಿದಾರರು ದೂರು ಕೊಟ್ಟಿರುವುದರಿಂದ ತನಿಖೆಯನ್ನೂ ಲೋಕಾಯುಕ್ತಕ್ಕೆ ಕೊಡುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ಹಲವು ತೀರ್ಪುಗಳನ್ನು ಪ್ರಸ್ತಾಪ ಮಾಡಿ ರಾಜ್ಯಪಾಲರಿಗೆ ಸ್ಪಷ್ಟೀಕರಣ ಕಳಿಸಿದ್ದೇವೆ. ರಾಜ್ಯಪಾಲರು ಉದ್ದೇಶಪೂರ್ವಕವಾಗಿ ಅನುಮತಿ ಕೊಟ್ಟಿದ್ದಾರೆಂದು ಆಡುವ ಮಕ್ಕಳಿಗೂ ಗೊತ್ತಾಗಿದೆ. ಕೋರ್ಟಿನಲ್ಲಿ ಇದು ನಿಲ್ಲಲ್ಲ ಎನ್ನುವ ಭರವಸೆ ಇದೆ. ನ್ಯಾಯಾಲಯ ಏನು ತೀರ್ಪು ಕೊಡಲಿದೆ ಎಂದು ನೋಡಬೇಕು. ಬಿಜೆಪಿಯವರೂ ಹೋರಾಟ ಮಾಡಲಿ, ಅದು ಅವರ ಹಕ್ಕು. ನಾವೂ ಹೋರಾಟ ಮಾಡುತ್ತೇವೆ ಎಂದು ನುಡಿದರು.







