ಪ್ರಕರಣಗಳ ಶೀಘ್ರ ವಿಚಾರಣೆಗೆ ಕೋರಿ ಹೈಕೋರ್ಟ್‍ಗೆ ರವಿ ಪೂಜಾರಿಯಿಂದ ಅರ್ಜಿ

ಬೆಂಗಳೂರು, ಜು.26: ತಮ್ಮನ್ನು ಸೆನೆಗಲ್‍ನಿಂದ ಹಸ್ತಾಂತರಿಸುವ ಸಂದರ್ಭದಲ್ಲಿ, ಸೆನೆಗಲ್ ನ್ಯಾಯಾಲಯ ಉಲ್ಲೇಖಿಸಿರುವ ಪ್ರಕರಣಗಳನ್ನು ಮಾತ್ರ ಶೀಘ್ರದಲ್ಲಿ ವಿಚಾರಣೆಗೆ ಒಳಪಡಿಸಿ ವಿಲೇವಾರಿ ಮಾಡುವಂತೆ ಕೋರಿ ಭೂಗತ ಪಾತಕಿ ರವಿ ಪೂಜಾರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
ಸೆನೆಗಲ್‍ನಿಂದ ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಮಹಾರಾಷ್ಟ್ರದ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸದ ಪ್ರಕರಣಗಳ ವಿಚಾರಣೆ ಒಳಪಡಿಸಬಹುದೇ ಎಂಬುದರ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಹಸ್ತಾಂತರ ಕಾಯಿದೆ ಸೆಕ್ಷನ್ 21ರ ಪ್ರಕಾರ, ವಿದೇಶದಿಂದ ಹಸ್ತಾಂತರಿಸಲ್ಪಟ್ಟ ವ್ಯಕ್ತಿಯನ್ನು ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸಿರುವ ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಬಹುದು. ಆದರೆ, ಇತರ ಪ್ರಕರಣಗಳ ವಿಚಾರಣೆಗೆ ಅವಕಾಶವಿಲ್ಲ. ಹಸ್ತಾಂತರ ಆದೇಶದಲ್ಲಿ ನಮೂದಿಸಿರುವ ಪ್ರಕರಣಗಳು ಹೊರತುಪಡಿಸಿ ಪೂಜಾರಿ ಅವರನ್ನು ವಿಚಾರಣೆಗೆ ಒಳಪಡಿಸುವುದು ಹಸ್ತಾಂತರ ಕಾಯಿದೆ ಸೆಕ್ಷನ್ 21ರನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಕರಣವೇನು?: ನಗರದ 1ನೆ ಎಸಿಎಂಎಂ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಆರೋಪಿಯನ್ನು ಸೆನೆಗಲ್‍ನಿಂದ ಭಾರತಕ್ಕೆ ಹಸ್ತಾಂತರಿಸಿದ್ದರು. ಆ ಬಳಿಕ ತಿಲಕ್ ನಗರ ಪೆÇಲೀಸ್ ಠಾಣೆ ಸೇರಿದಂತೆ ಇತರ ಠಾಣೆಗಳಿಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದರು. ಅದಾದ ಬಳಿಕ ಆರೋಪಿ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣಗಳಲ್ಲಿ ಕೆಲವು ವಿಚಾರಣೆ ಪ್ರಾರಂಭವಾಗಿದ್ದು, ಆದೇಶಗಳು ಹೊರ ಬಂದಿವೆ. ಇನ್ನೂ ಹಲವು ಪ್ರಕರಣಗಳು ವಿಚಾರಣೆಯಿಂದ ಬಾಕಿ ಉಳಿದಿವೆ.







