ಫೋನ್ ಟ್ಯಾಪಿಂಗ್ ಆರೋಪ ಸಂಪೂರ್ಣ ಸುಳ್ಳು: ಗೃಹ ಸಚಿವ ಡಾ. ಜಿ. ಪರಮೇಶ್ವರ್

ಬೆಂಗಳೂರು: ಸರ್ಕಾರ ಫೋನ್ ಟ್ಯಾಪ್ ಮಾಡುತ್ತಿದೆ ಎಂಬ ಬಿಜೆಪಿಯ ಆರೋಪವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತೀವ್ರವಾಗಿ ತಳ್ಳಿಹಾಕಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ನಾವು ಯಾರ ಫೋನ್‌ಗಳನ್ನೂ ಟ್ಯಾಪ್ ಮಾಡಿಲ್ಲ. ಮಾಡುವುದೂ ಇಲ್ಲ. ಅದಕ್ಕೆ ನಮಗೆ ಯಾವುದೇ ಅವಶ್ಯಕತೆಯೂ ಇಲ್ಲ” ಎಂದು ಸ್ಪಷ್ಟಪಡಿಸಿದರು.
“ಅವರು ಏನು ಮಾಡುತ್ತಿದ್ದರೋ ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆರೋಪ ಮಾಡುವುದಕ್ಕೂ ಫೋನ್ ಟ್ಯಾಪ್ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಪ್ರತಿದಿನ ನೂರಾರು ಆರೋಪಗಳನ್ನು ಮಾಡುತ್ತಾರೆ. ಅದಕ್ಕಾಗಿ ನಾವು ಅವರ ಖಾಸಗಿ ವಿಚಾರಗಳಿಗೆ ಹೋಗುತ್ತೇವೆ ಎನ್ನುವುದು ಶುದ್ಧ ತಪ್ಪು” ಎಂದು ಹೇಳಿದರು.
ಸಿಎಲ್‌ಪಿಯಲ್ಲಿ ಸೋಮವಾರ ಹಾಗೂ ಮಂಗಳವಾರ ಅಧಿವೇಶನ ವಿಸ್ತರಣೆ ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಬಿಎಸಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿ ಅಥವಾ ನಾನು ಈ ಕುರಿತು ತೀರ್ಮಾನ ಕೈಗೊಳ್ಳುವುದಿಲ್ಲ” ಎಂದರು.
ಸಿಎಲ್‌ಪಿ ಸಭೆಯಲ್ಲಿ ಎಂಎಲ್‌ಸಿ ಸುಧಾಮ್ ದಾಸ್ ಆಕ್ರೋಶ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಶಾಸಕರು ಪ್ರಸ್ತಾಪಿಸಿದ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿ ಗಮನಿಸಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.
ಪಿಎಸ್ಐ ವರ್ಗಾವಣೆ ಮಿತಿ ಕುರಿತು ಮಾತನಾಡಿದ ಅವರು, “ಒಂದು ವರ್ಷ ಅಥವಾ ಎರಡು ವರ್ಷ ಅವಧಿಯ ಸಾಧಕ–ಬಾಧಕಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.
ಕರೆಮ್ಮ ನಾಯಕ ಅವರಿಗೆ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಯಾರೋ ಒಬ್ಬ ಅಧಿಕಾರಿ ಮಾತನಾಡಿದ ಮಾತ್ರಕ್ಕೆ ಮಂತ್ರಿಗಳ ಮೇಲೆ ಆರೋಪ ಮಾಡುವುದನ್ನು ನಾವು ಖಂಡಿಸಿದ್ದೇವೆ. ಪ್ರೂವ್ ಮಾಡಿದ ಬಳಿಕವೇ ಸದನದಲ್ಲಿ ಮಾತನಾಡಬೇಕು. ಕರೆಮ್ಮ ನಾಯಕ ಅವರಿಗೆ ಬೆದರಿಕೆ ಇರುವುದಾಗಿ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅವರಿಗೆ ಸಂಪೂರ್ಣ ರಕ್ಷಣೆ ನೀಡುವುದಾಗಿ ಸದನದಲ್ಲೇ ಭರವಸೆ ನೀಡಿದ್ದೇನೆ” ಎಂದು ಹೇಳಿದರು.







