ಸಾರಿಗೆ ನೌಕರರ ಪ್ರಸ್ತಾಪಿತ ಮುಷ್ಕರ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್; ನಾಳೆ ವಿಚಾರಣೆ ಸಾಧ್ಯತೆ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಕರೆದಿರುವ ಸಾರಿಗೆ ನೌಕರರ ಮುಷ್ಕರವನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಬೆಂಗಳೂರಿನಲ್ಲಿ ಮನೆಗೆಲಸ ಮಾಡುತ್ತಿರುವ ಸಿ. ವೇದವತಿ ಹಾಗೂ ಕಟ್ಟಡ ಕಾರ್ಮಿಕ ಎಚ್.ವಿ. ಶ್ರೀಧರ ಎಂಬವರು ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಹಾಗೂ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿಯು ಮಂಗಳವಾರ (ಮೇ 19) ರಜಾಕಾಲದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಮುಷ್ಕರ ನಡೆಸದಂತೆ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶಿಸಬೇಕು ಹಾಗೂ ಯಾವುದೇ ಮುಷ್ಕರ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಹಾಗೂ ಸಾರಿಗೆ ನಿಗಮಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿಯಲ್ಲೇನಿದೆ?
ರಾಜ್ಯ ಸರ್ಕಾರವು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ (ತಿದ್ದುಪಡಿ) ಕಾಯ್ದೆ (ಎಸ್ಮಾ) ಅಡಿ 2026ರ ಜನವರಿ 1ರಿಂದ ಜೂನ್ 30ರವರೆಗೆ ಮುಷ್ಕರ ನಿಷೇಧಿಸಿದೆ. ಈ ಕಾಯ್ದೆಯ ಸೆಕ್ಷನ್ 4 ಹಾಗೂ 5ರ ಅಡಿ ಮುಷ್ಕರದಲ್ಲಿ ಭಾಗವಹಿಸಿದರೆ ಹಾಗೂ ಭಾಗವಹಿಸುವಂತೆ ಪ್ರಚೋದಿಸುವ ವ್ಯಕ್ತಿಯನ್ನು 6 ತಿಂಗಳು ಜೈಲಿನಲ್ಲಿ ಇಡಬಹುದಾಗಿದೆ. ಕೈಗಾರಿಕಾ ವಿವಾದಗಳ ಕಾಯ್ದೆ ಅಡಿಯಲ್ಲೂ ಸಾರಿಗೆ ಸಂಸ್ಥೆಗಳ ಸೇವೆಯನ್ನು ಸಾರ್ವಜನಿಕ ಬಳಕೆ ಸೇವೆ ಎಂದು ಘೋಷಿಸಲಾಗಿದೆ. ಈ ಸಂಬಂಧ ಸಂಧಾನ ಪ್ರಕ್ರಿಯೆ ನಡೆಯುತ್ತಿದ್ದು, ಇದರ ವಿಚಾರಣೆ ಮೇ 25ಕ್ಕೆ ನಿಗದಿಯಾಗಿದೆ. ಕೈಗಾರಿಕಾ ವಿವಾದ ಕಾಯ್ದೆ ಸೆಕ್ಷನ್ 22(1)(ಎ) ಅನ್ವಯ ಮುಷ್ಕರ ನಡೆಸುವ 14 ದಿನ ಮುಂಚಿತವಾಗಿ ಭಿತ್ತಿಪತ್ರ ಬಿಡುಗಡೆ ಮಾಡಬೇಕು. ಆದರೆ, ಇದನ್ನು ಐದಾರು ದಿನಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಸಾರ್ವಜನಿಕ ಬಸ್‌ಗಳಲ್ಲಿ ಪ್ರತಿದಿನ 1.20 ಕೋಟಿ ಮಂದಿ ಸಂಚಾರ ಮಾಡುತ್ತಿದ್ದು, ಇದರಲ್ಲಿ ಶೇ. 60 ಮಂದಿ ಮಹಿಳೆಯರಾಗಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಚಾಲ್ತಿಯಲ್ಲಿರುವುದರಿಂದ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ಪ್ರಸ್ತಾಪಿತ ಮುಷ್ಕರವು ಮೇ 20ರಿಂದ ನಡೆಯುವ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಮೇ 18ರಿಂದ 25ರವರೆಗೆ ನಡೆಯಲಿವೆ. ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಾರ್ವಜನಿಕ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ದಿನಗೂಲಿ ಅವಲಂಬಿಸಿರುವವರು, ರೋಗಿಗಳು, ವಯಸ್ಕರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರು ಸಾರ್ವಜನಿಕ ಬಸ್ ಅವಲಂಬಿಸಿದ್ದು, ಮುಷ್ಕರದಿಂದ ಅವರಿಗೆ ಸಮಸ್ಯೆಯಾಗಲಿದೆ ಎಂದು ವಿವರಿಸಲಾಗಿದೆ.
ಈ ಹಿಂದೆ 2023 ಹಾಗೂ 2025ರಲ್ಲಿ ಹೈಕೋರ್ಟ್ ಮಧ್ಯಪ್ರವೇಶದಿಂದ ಮುಷ್ಕರ ಹಿಂಪಡೆಯಲಾಗಿತ್ತು. 2025ರಲ್ಲಿ ಹೈಕೋರ್ಟ್ ಆದೇಶದ ಹೊರತಾಗಿಯೂ ಸಾರ್ವಜನಿಕ ಬಸ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, 17,200 ಷೋಕಾಸ್ ನೋಟಿಸ್‌ಗಳನ್ನು ಜಾರಿ ಮಾಡಬೇಕಿದೆ. 2025ರ ಏಪ್ರಿಲ್ 1ರಂದು ರಾಜ್ಯ ಸರ್ಕಾರ ಸಾರಿಗೆ ಸಿಬ್ಬಂದಿಯ ವೇತನದಲ್ಲಿ ಶೇ 12.5 ಪ್ರಮಾಣದಲ್ಲಿ ಪರಿಷ್ಕರಿಸಿದ್ದು, 1,271.92 ಕೋಟಿ ರೂ. ಹಂಚಿಕೆ ಮಾಡಿದೆ. ಮೊದಲ ವಂತಿಗೆ ರೂಪದಲ್ಲಿ 450 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಂಧಾನ ಸಂಬಂಧಿತ ವಿಚಾರಣೆಯು ಐದು ದಿನ ಇರುವ ಸಂದರ್ಭದಲ್ಲಿ ಪ್ರಸ್ತಾವಿತ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.






