‘ಪಿಲಿಕುಳಕ್ಕೆ ಹೊಸ ರೂಪ’ 339 ಎಕರೆ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್, ಶೀಘ್ರ ಟೆಂಡರ್ : ಸಚಿವ ಡಾ.ಅಜಯ್ ಸಿಂಗ್

ಬೆಂಗಳೂರು : ಮಂಗಳೂರಿನ ಪಿಲಿಕುಳ ನಿಸರ್ಗಧಾಮವನ್ನು ವಿಜ್ಞಾನ, ಪರಿಸರ, ಶಿಕ್ಷಣ ಮತ್ತು ಪ್ರವಾಸೋದ್ಯಮವನ್ನು ಒಳಗೊಂಡ ಸಮಗ್ರ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದ್ದು, ಇದಕ್ಕಾಗಿ ಶೀಘ್ರದಲ್ಲೇ ಟೆಂಡರ್ ಕರೆಯಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಅಧೀನ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು, ಮಂಗಳೂರಿನ ಪಿಲಿಕುಳದ ಅಭಿವೃದ್ಧಿ ಕುರಿತು ಚರ್ಚಿಸಿದ್ದು, ಲಭ್ಯವಿರುವ ಜಮೀನಿನ ಸಮರ್ಪಕ ಬಳಕೆ, ಈಗಿರುವ ಸೌಲಭ್ಯಗಳ ಉನ್ನತೀಕರಣ, ಹೊಸ ಆಕರ್ಷಣೆಗಳ ಅಭಿವೃದ್ಧಿ, ವಿಜ್ಞಾನ ಶಿಕ್ಷಣ, ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆ ಹಾಗೂ ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವ ಅಂಶಗಳು ಮಾಸ್ಟರ್ ಪ್ಲಾನ್‍ನಲ್ಲಿ ಒಳಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಪಿಲಿಕುಳದಲ್ಲಿ ಉತ್ತಮ ಭೂಮಿ, ಪ್ರಕೃತಿ ಸಂಪತ್ತು ಹಾಗೂ ಈಗಾಗಲೇ ವಿಜ್ಞಾನ ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾದ ಮೂಲಸೌಕರ್ಯ ಇದೆ. ಇದನ್ನು ತುಂಡು-ತುಂಡಾಗಿ ಅಭಿವೃದ್ಧಿಪಡಿಸುವ ಬದಲು ಮುಂದಿನ 10-15 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಬೇಕು. ಪಿಲಿಕುಳವನ್ನು ದೇಶದ ಪ್ರಮುಖ ವಿಜ್ಞಾನ-ಪರಿಸರ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿ ಬೆಳೆಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಅಜಯ್ ಸಿಂಗ್ ಹೇಳಿದರು.
ಪಿಲಿಕುಳದ ಅಭಿವೃದ್ಧಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಯಾವ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದು, ಯಾವ ಸೌಲಭ್ಯಗಳನ್ನು ವಾಣಿಜ್ಯವಾಗಿ ಮತ್ತು ಸುಸ್ಥಿರವಾಗಿ ನಿರ್ವಹಿಸಬಹುದು ಹಾಗೂ ನಿಸರ್ಗಧಾಮವನ್ನು ಆರ್ಥಿಕವಾಗಿ ಸದೃಢಗೊಳಿಸಲು ಯಾವ ರೀತಿಯ ಆದಾಯ ಮಾದರಿಗಳನ್ನು ರೂಪಿಸಬಹುದು ಎಂಬುದನ್ನು ಮಾಸ್ಟರ್ ಪ್ಲಾನ್‍ನಲ್ಲಿ ಅಧ್ಯಯನ ಮಾಡಬೇಕು ಎಂದು ಅವರು ಸೂಚಿಸಿದರು.
ಸರಕಾರದ ಅನುದಾನವನ್ನೇ ಅವಲಂಬಿಸುವ ವ್ಯವಸ್ಥೆಯ ಬದಲು, ಪಿಲಿಕುಳ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡೇ ಆರ್ಥಿಕವಾಗಿ ಸದೃಢವಾಗುವ ಮಾದರಿ ರೂಪಿಸಬೇಕು. ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸುವಂತಹ ಸೌಲಭ್ಯಗಳು, ವಿಜ್ಞಾನ ಚಟುವಟಿಕೆಗಳು ಹಾಗೂ ವಿಶಿಷ್ಟ ಅನುಭವಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಮಾಸ್ಟರ್ ಪ್ಲಾನ್ ಪರಿಶೀಲಿಸಬೇಕು ಎಂದರು.
ಸಭೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳ, ಮಾಜಿ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ಕರ್ನಾಟಕ ಕ್ವಾಂಟಮ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಪ್ರೊ.ಅರಿಂದಮ್ ಘೋಷ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.






