ಬೆಂಗಳೂರು ಸಂಚಾರ ದಟ್ಟಣೆಯಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡರೂ ಸರಿಯಾದ ಸಮಯಕ್ಕೆ ತಲುಪಿದ ಪಿಝ್ಝಾ; ವಿಡಿಯೋ ವೈರಲ್

Photo: NDTV
ಬೆಂಗಳೂರು: ಬುಧವಾರ ಸಂಜೆ ಬೆಂಗಳೂರಿನಲ್ಲಿ ಭಾರೀ ಸಂಚಾರ ದಟ್ಟಣೆ ಸೃಷ್ಟಿಯಾಗಿತ್ತು. ಬುಧವಾರ ಬೆಂಗಳೂರಿನ ಸಂಚಾರವು ಅಕ್ಷರಶಃ ಸ್ತಬ್ಧವಾಗಿತ್ತು. ಹಲವಾರು ವೃತ್ತಗಳು ಹಾಗೂ ಚೌಕಗಳಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೊರ ವರ್ತುಲ ರಸ್ತೆಯಲ್ಲಂತೂ ಸಂಚಾರ ದಟ್ಟಣೆಯಿಂದ ವಾಹನಗಳು ಆಮೆಗತಿಯಲ್ಲಿ ಚಲಿಸುವಂತೆ ಆಗಿತ್ತು.
ಇಂತಹ ಹಲವಾರು ಸಂಚಾರ ದಟ್ಟಣೆಯ ಸವಾಲುಗಳ ನಡುವೆಯೂ ಡೊಮಿನೊ ಡೆಲಿವರಿ ಎಕ್ಸಿಕ್ಯೂಟಿವ್ ಗಳು ಸರಿಯಾದ ಸಮಯಕ್ಕೆ ಗ್ರಾಹಕರಿಗೆ ಪಿಝ್ಝಾ ಪೂರೈಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
“ನಾವು @dominos ಮೂಲಕ ಪಿಝ್ಝಾಗೆ ಆರ್ಡರ್ ಮಾಡಿದಾಗ ಬೆಂಗಳೂರು ಸಂಚಾರ ದಟ್ಟಣೆಯಿಂದ ಸ್ತಬ್ಧವಾಗಿತ್ತು. ಅವರು ನಮ್ಮ ಲೈವ್ ಲೊಕೇಶನ್ ಪತ್ತೆ ಹಚ್ಚಿ ಸಂಚಾರ ದಟ್ಟಣೆಯ ನಡುವೆಯೂ ನಮಗೆ ಸರಿಯಾದ ಸಮಯಕ್ಕೆ ಪಿಝ್ಝಾ ಪೂರೈಸಿದರು” ಎಂದು ಎಕ್ಸ್ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಈವರೆಗೆ ಸುಮಾರು 3 ಲಕ್ಷ ವೀಕ್ಷಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು, “ಡೊಮಿನೊ ಸಂಸ್ಥೆಯು 30 ನಿಮಿಷಗಳ ತನ್ನ ಭರವಸೆಯನ್ನು ಪೂರೈಸುತ್ತಿದೆ. ಇದು ನಿಜಕ್ಕೂ ಅದ್ಭುತ. ಮತ್ತೊಂದೆಡೆ, ಡೆಲಿವರಿ ಸಿಬ್ಬಂದಿಯನ್ನೂ ಗಮನಕ್ಕೆ ತೆಗೆದುಕೊಳ್ಳಿ. ಭಾರಿ ಸಂಚಾರ ದಟ್ಟಣೆಯ ನಡುವೆ ಸ್ಥಳವನ್ನು ಪತ್ತೆ ಹಚ್ಚುವುದು ಹಾಗೂ ನಿರಂತರವಾಗಿ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಪೂರೈಸುವುದು - ಇದು ನಿಜಕ್ಕೂ ಅವರ ಪಾಲಿಗೆ ಸವಾಲಿನ ಕೆಲಸ” ಎಂದು ಪ್ರತಿಕ್ರಿಯಿಸಿದ್ದಾರೆ.
ಸಾಮಾನ್ಯ ದಿನಗಳಿಗಿಂತ ಬುಧವಾರ ಎರಡು ಪಟ್ಟು ಸಂಚಾರ ದಟ್ಟಣೆಯಿತ್ತು. ಪ್ರತಿ ದಿನ 1.5 ಲಕ್ಷದಿಂದ 2 ಲಕ್ಷದಷ್ಟು ಇರುತ್ತಿದ್ದ ವಾಹನಗಳ ಸಂಖ್ಯೆ ಬುಧವಾರ ಸಂಜೆ 3.5 ಲಕ್ಷಕ್ಕೇರಿತ್ತು.







