ವಿದೇಶದಲ್ಲಿ ರೋಮ್ಯಾಂಟಿಕ್ ಸೀನ್ಗಳಲ್ಲಿ ಮುಳುಗಿರುವ ಪ್ರಧಾನಿ: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಬಿ.ಕೆ. ಹರಿಪ್ರಸಾದ್
ಬೆಂಗಳೂರು: ದೇಶ ಉರಿಯುತ್ತಿರುವಾಗ ಪ್ರಧಾನಿ ಮೋದಿ ವಿದೇಶದಲ್ಲಿ ರೋಮ್ಯಾಂಟಿಕ್ ಸೀನ್ಗಳಲ್ಲಿ ಮುಳುಗಿದ್ದಾರೆ. 75 ವರ್ಷದ ಮುದಿಯ ಪ್ರಾಯದ ಪ್ರಧಾನಿ, ತಮಗಿಂತ ವಯಸ್ಸಿನಲ್ಲಿ ತೀರಾ ಚಿಕ್ಕವರಾದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ಚಾಕಲೇಟ್ ಹಂಚಿಕೊಳ್ಳುತ್ತಾ ಕಾಲ ಕಳೆಯುತ್ತಿರುವುದು ನೋಡಿದರೆ ಜನರಿಗೆ ನಗು ಬರುತ್ತದೆ, ಜೊತೆಗೆ ಅಸಹ್ಯವೂ ಆಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೋಮ್ ನಗರವು ಬೆಂಕಿಯ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದ್ದಾಗ, ಅಲ್ಲಿನ ಕ್ರೂರ ಚಕ್ರವರ್ತಿ ನೀರೋ ಆರಾಮವಾಗಿ ಕುಳಿತು ಪಿಟೀಲು ಬಾರಿಸುತ್ತಿದ್ದ’ ಎಂಬ ಇತಿಹಾಸ ಪ್ರಸಿದ್ಧ ಗಾದೆಯಿದೆ. ಇವತ್ತು ನಮ್ಮ ದೇಶದಲ್ಲೂ ಆಂತರಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಜನರ ಸಮಸ್ಯೆಗಳನ್ನು ಆಲಿಸಬೇಕಾದ ಪ್ರಧಾನಿ ವಿದೇಶಿ ಪ್ರವಾಸಗಳಲ್ಲಿ ತಲ್ಲೀನರಾಗಿದ್ದಾರೆ ಎಂದು ಹೇಳಿದರು.
ಲಕ್ಷಾಂತರ ಭವಿಷ್ಯವನ್ನು ನಿರ್ಧರಿಸುವ ‘ನೀಟ್’ ನಂತಹ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ, ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತು ಆರ್ಥಿಕ ಹಿಂಜರಿತದ ನೆಪವೊಡ್ಡಿ ಪ್ರತಿ ಮೂರು ದಿನಕ್ಕೊಮ್ಮೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಹೆಚ್ಚಳ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಆಕಾಶ ಮುಟ್ಟಿ ಸಾಮಾನ್ಯ ಜನರ ತಟ್ಟೆಗೆ ಕೈ ಇಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹರಿಪ್ರಸಾದ್ ತಿಳಿಸಿದರು.
ಮೋದಿ ಒಂದು ರೀತಿಯಲ್ಲಿ ‘ಆಸ್ಟ್ರಿಚ್’ ಪಕ್ಷಿ ಇದ್ದ ಹಾಗೆ. ಮರುಭೂಮಿಯಲ್ಲಿ ಭೀಕರ ಬಿರುಗಾಳಿ ಅಥವಾ ಸಂಕಷ್ಟ ಎದುರಾದಾಗ ಆಸ್ಟ್ರಿಚ್ ಪಕ್ಷಿಯು ಮರಳಿನೊಳಗೆ ತನ್ನ ಕತ್ತನ್ನು ಹೂತುಕೊಂಡು, ಜಗತ್ತಿನಲ್ಲಿ ಏನೂ ಆಗುತ್ತಿಲ್ಲ ಎಂಬಂತೆ ಸುಮ್ಮನೆ ಕೂರುತ್ತದೆ. ಪ್ರಧಾನಿಯೂ ಅಷ್ಟೇ, ದೇಶದಲ್ಲಿ ತೀವ್ರ ಸಮಸ್ಯೆಗಳು ಎದ್ದಾಗ, ಅವುಗಳನ್ನು ಎದುರಿಸುವ ಬದಲು ವಿದೇಶಿ ಪ್ರವಾಸಗಳ ಹೆಸರಿನಲ್ಲಿ ಪಲಾಯನ ಮಾಡುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.
ಮೋದಿ ಇಟಲಿಗೆ ಹೋಗಿ ‘ಪಾರ್ಲೆ ಮೆಲೋಡಿ’ ಚಾಕೊಲೇಟ್ ಅನ್ನು ಜಾರ್ಜಿಯಾ ಮೆಲೋನಿಗೆ ಕೊಟ್ಟು, ಭಾರತದಲ್ಲಿ ಪಾರ್ಲೆ ಕಂಪನಿಯ ಶೇರು ದರ ಹೆಚ್ಚಳವಾಗುವಂತೆ ಮಾಡಿದ್ದಾರೆ ಎಂದು ಟೀಕಿಸಿದ ಹರಿಪ್ರಸಾದ್, ದೇಶದ ರಾಜತಾಂತ್ರಿಕತೆ ಬಿಟ್ಟು, ಪಾರ್ಲೆ ಕಂಪನಿಯ ಜೊತೆ ಸೇರಿಕೊಂಡು ವ್ಯಾಪಾರ ಕುದುರಿಸಿದ್ದಾರೆ ಎಂದು ಆರೋಪಿಸಿದರು.
ರಾಜನೇ ವ್ಯಾಪಾರಿಯಾದಾಗ ದೇಶದ ಪ್ರಜೆಗಳು ಬಿಕಾರಿಯಾಗುತ್ತಾರೆ ಎಂಬುದು ಚಾಣಕ್ಯನ ಪ್ರಸಿದ್ಧ ಸೂತ್ರ. ಇವತ್ತು ನಮ್ಮ ದೇಶದ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿಲ್ಲ. ಭಾರತದ ಇತಿಹಾಸದಲ್ಲೆ ದೇಶದ ಜನರನ್ನು ಅತ್ಯಂತ ಕಡು ಬಿಕಾರಿ ಮಾಡಿದ ಪ್ರಧಾನಿ ಯಾರಾದರೂ ಇದ್ದರೆ, ಅದು ನರೇಂದ್ರ ಮೋದಿ ಮಾತ್ರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸಾರ್ವಜನಿಕ ಆಸ್ತಿಗಳನ್ನು, ಉದ್ಯಮಗಳನ್ನು, ಸಂಪತ್ತನ್ನು ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಾ, ಇಡೀ ಆಡಳಿತವ ವ್ಯವಸ್ಥೆಯನ್ನೆ ವ್ಯಾಪಾರೀಕರಣಗೊಳಿಸಿದ್ದಾರೆ. ಜನರ ಬದುಕನ್ನು ಬೀದಿಗೆ ತಂದಿದ್ದಾರೆ ಎಂದು ಹರಿಪ್ರಸಾದ್ ಕಿಡಿಗಾರಿದರು.






