ಸಂತ್ರಸ್ತೆ ಬೇರೊಬ್ಬರನ್ನು ವಿವಾಹವಾದರೆ ಆರೋಪಿ ವಿರುದ್ಧದ ಪೋಕ್ಸೊ ಪ್ರಕರಣ ರದ್ದುಪಡಿಸಲಾಗದು: ಹೈಕೋರ್ಟ್

Photo credit: PTI
ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿಯ ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾಗಿದ್ದ ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸಲಾಗದು ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ಸಂತ್ರಸ್ತೆ ಬೇರೊಬ್ಬನನ್ನು ಮದುವೆಯಾಗಿದ್ದಾರೆ ಹಾಗೂ ಪ್ರಕರಣದ ಸಹ ಆರೋಪಿಗಳು ಖುಲಾಸೆಯಾಗಿದ್ದಾರೆ ಎಂಬ ಕಾರಣಕ್ಕೆ ಪೋಕ್ಸೊ ಪ್ರಕರಣ ಹಾಗೂ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ದೇವನಹಳ್ಳಿ ತಾಲೂಕಿನ ಪಾಲಾಕ್ಷ ಕುಮಾರ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, ಪ್ರಕರಣದಲ್ಲಿ ಅರ್ಜಿದಾರ ಮೊದಲ ಆರೋಪಿಯಾಗಿದ್ದಾನೆ. ಪ್ರಕರಣದ ಇತರ ಆರೋಪಿಗಳು ಖುಲಾಸೆಯಾಗಿದ್ದಾರೆ ಎಂದರೆ, ಆ ಆದೇಶ ಅರ್ಜಿದಾರನಿಗೆ ಹೇಗೆ ಅನ್ವಯಿಸುತ್ತದೆ? ಎಂದು ಪ್ರಶ್ನಿಸಿದರು. ಅರ್ಜಿದಾರನ ಪರ ವಕೀಲರು, ಸಂತ್ರಸ್ತೆ ಸಂಧಾನ ಮೂಲಕ ಪ್ರಕರಣವನ್ನು ಬಗೆಹರಿಸಿಕೊಳ್ಳಲು ಸಿದ್ಧರಿದ್ದಾರೆ ಎಂದರು.
ಇದಕ್ಕೆ ನ್ಯಾಯಪೀಠ, ಸಂತ್ರಸ್ತೆ ಅರ್ಜಿದಾರನನ್ನು ಮದುವೆಯಾಗಿದ್ದಾರೆಯೇ? ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾದರೆ ಅರ್ಜಿದಾರನ ಮೇಲಿನ ಆರೋಪಗಳು ಹೇಗೆ ಅಳಿಸಿ ಹೋಗುತ್ತದೆ? ಎಂದು ಮರುಪ್ರಶ್ನೆ ಹಾಕಿತು.
ಪೋಕ್ಸೊ ಪ್ರಕರಣದಲ್ಲಿ ಅರ್ಜಿದಾರ ಮೊದಲನೆ ಆರೋಪಿಯಾಗಿದ್ದಾನೆ. ಆತನ ಮೇಲೆ ಪೋಕ್ಸೊ ಕಾಯ್ದೆಯ ಸೆಕ್ಷನ್ 3 ಮತ್ತು 4 ಅಡಿಯ ಲೈಂಗಿಕ ದೌರ್ಜನ್ಯ ಅಪರಾಧದ ಆರೋಪಗಳಿವೆ. ಪ್ರಕರಣದಲ್ಲಿ ಸಹ ಆರೋಪಿಗಳು ಖುಲಾಸೆಯಾಗಿದ್ದಾರೆ ಎಂದು ಅರ್ಜಿದಾರ ಖುಲಾಸೆಯಾಗಲ್ಲ. ವಿಚಾರಣಾ ನ್ಯಾಯಾಲಯದ ಮುಂದೆ ಹೋಗಿ, ವಿಚಾರಣೆ ಎದುರಿಸಿ ಎಂದು ನ್ಯಾಯಪೀಠ ತಾಕೀತು ಮಾಡಿತು.
ಈ ವೇಳೆ ಸಂತ್ರಸ್ತೆ ಮದುವೆಯಾಗಿದ್ದಾರೆ ಎಂದು ವಾದ ಮಂಡಿಸಲು ಆರಂಭಿಸಿದ ಅರ್ಜಿದಾರ ಪರ ವಕೀಲರನ್ನು ತಡೆದ ನ್ಯಾಯಪೀಠ, ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಅರ್ಜಿದಾರರ ಮೇಲಿನ ಅಪರಾಧಗಳು ಅಳಿಸಿ ಹೋಗುವುದಿಲ್ಲ. ಅಪ್ತಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ ರದ್ದಾಗುವುದಿಲ್ಲ. ಪ್ರಕರಣವನ್ನು ರಾಜೀ ಮಾಡಲಾಗದು. ಅರ್ಜಿಯನ್ನು ವಜಾಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಅರ್ಜಿದಾರ ವಿರುದ್ಧದ ಪ್ರಕರಣ ರದ್ದುಪಡಿಸಲಾಗದು ಎಂದು ತಿಳಿಸಿ, ಆದೇಶ ಬರೆಸಲು ಮುಂದಾಯಿತು.
ಆಗ ಅರ್ಜಿದಾರರ ಪರ ವಕೀಲರು ಅರ್ಜಿ ಹಿಂಪಡೆಯಲು ಅನುಮತಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ನ್ಯಾಯಪೀಠ ಅನುಮತಿಸಿತು.






