ಪೋಕ್ಸೊ ಪ್ರಕರಣ | ಬೆಂಗಳೂರಿನ ಹೊರಗೆ ಸಂಚರಿಸಲು ಮಾಜಿ ಸಿಎಂ ಬಿಎಸ್ವೈಗೆ ಹೈಕೋರ್ಟ್ ಅನುಮತಿ

ಬಿ.ಎಸ್. ಯಡಿಯೂರಪ್ಪ
ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಾಗ ಅನುಮತಿ ಪಡೆಯದೆ ಬೆಂಗಳೂರಿನ ವಿಶೇಷ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಿಸಲಾಗಿದ್ದ ಷರತ್ತನ್ನು ಹೈಕೋರ್ಟ್ ಸಡಿಲಿಸಿದೆ.
ಜಾಮೀನು ಷರತ್ತು ಸಡಿಲಿಕೆಗೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪುರಸ್ಕರಿಸಿದೆ. ಇದರಿಂದ, ಯಡಿಯೂರಪ್ಪ ಅವರು ಬೆಂಗಳೂರು ವ್ಯಾಪ್ತಿಯಿಂದ ಹೊರಗೆ ಪ್ರಯಾಣಿಸಬಹುದಾಗಿದೆ.
ವಿಚಾರಣೆ ವೇಳೆ ಯಡಿಯೂರಪ್ಪ ಅವರ ಪರ ವಕೀಲರು ಹಾಜರಾಗಿ, ಅರ್ಜಿದಾರರ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರಾದ ವೇಳೆ ಅನುಮತಿ ಇಲ್ಲದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ (ಬೆಂಗಳೂರು) ಬಿಟ್ಟು ಹೊಗುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ. ಸುಪ್ರೀಂಕೋರ್ಟ್ ತಡೆ ಆದೇಶ ಪರಿಗಣಿಸಿ ಈ ಷರತ್ತು ಸಡಿಲಿಕೆಗೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಅದನ್ನು ಪುರಸ್ಕರಿಸಬೇಕು ಎಂದು ಕೋರಿದರು.
ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿ ಹೊರಡಿಸಿರುವ ಆದೇಶ ಪರಿಗಣಿಸಿದ ನ್ಯಾಯಪೀಠ, ಯಡಿಯೂರಪ್ಪ ಅವರ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿತು.
ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಯಡಿಯೂರಪ್ಪ ಅವರಿಗೆ ಹೈಕೋರ್ಟ್ 2025ರ ಫೆಬ್ರವರಿ 7ರಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಈ ವೇಳೆ ಅನುಮತಿ ಪಡೆಯದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರಹೋಗುವಂತಿಲ್ಲ ಎಂಬ ಷರತ್ತು ವಿಧಿಸಿತ್ತು.






