ಮೇಲ್ಸೇತುವೆ ಕೆಳಗೆ ನಿಂತ ಮಳೆ ನೀರು ತೆರವುಗೊಳಿಸಿದ ಕಾನ್ಸ್‌ಟೇಬಲ್: ಪೊಲೀಸ್ ಕಮಿಷನರ್ ಬಿ.ದಯಾನಂದ ಶ್ಲಾಘನೆ

ಬೆಂಗಳೂರು, ಸೆ.1: ಹೆಬ್ಬಾಳ ಮೇಲ್ಸೇತುವೆ ಕೆಳಗೆ ನಿಂತ ಮಳೆ ನೀರನ್ನು ತೆರವುಗೊಳಿಸುವ ಮುಖೇನ ಸಾರ್ವಜನಿಕರ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಬೆಂಗಳೂರು ನಗರ ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್ ಅವರ ಕಾರ್ಯಕ್ಕೆ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆ.31ರ ರಾತ್ರಿ ಅನಿರೀಕ್ಷಿತವಾಗಿ ಮಳೆ ಬಂದು ಹಲವೆಡೆ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ನಮ್ಮ ಸಂಚಾರ ವಿಭಾಗ ಸಿಬ್ಬಂದಿ ರಾತ್ರಿ 12 ಗಂಟೆಗೆ ಸುಮಾರಿಗೆ ನೀರು ತೆರವುಗೊಳಿಸಿ ಉತ್ತಮ ಕೆಲಸ ಮಾಡಿದ್ದಾರೆ. ಆಳವಾದ ನೀರಲ್ಲಿ ಹೋಗಿ ಕ್ಲಿಯರ್ ಮಾಡಿಕೊಟ್ಟಿದ್ದಾರೆ. ಅವರ ಕಾರ್ಯಕ್ಕೆ ನಾನು ಶ್ಲಾಘನೆ ವ್ಯಕ್ತಪಡಿಸಿದ್ದೇನೆ ಎಂದು ಬಿ.ದಯಾನಂದ್ ತಿಳಿಸಿದ್ದಾರೆ.
ಇನ್ನು ರಾತ್ರಿ ಸುರಿದ ಮಳೆಗೆ ನಗರದಲ್ಲಿ 20ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಸಂಜಯನಗರ, ಹಲಸೂರು, ಕೋರಮಂಗಲ, ಸದಾಶಿವನಗರ, ವೈಯಾಲಿಕಾವಲ್ ಸೇರಿ ಹಲವೆಡೆ ಮರಗಳು ಧರೆಗುರುಳಿವೆ. ಕೂಡಲೇ ಸಂಬಂಧಪಟ್ಟಂತಹ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಬಿ.ದಯಾನಂದ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.