ಇರಾನ್ ಮೇಲೆ ಇಂದೇ ದಾಳಿ ಸಾಧ್ಯತೆ: ಟ್ರಂಪ್
ಒಪ್ಪಂದಕ್ಕೆ ಬರುವ ಸಾಧ್ಯತೆಯ ಬಗ್ಗೆಯೂ ಸುಳಿವು

Photo: PTI
ವಾಷಿಂಗ್ಟನ್: ಇರಾನ್ ಮೇಲೆ ಅಮೆರಿಕವು ರವಿವಾರ ದಾಳಿ ನಡೆಸಬಹುದು ಅಥವಾ ಟೆಹ್ರಾನ್ ನೊಂದಿಗೆ ಮಹತ್ವದ ಒಪ್ಪಂದ ಏರ್ಪಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವ ಸಾಧ್ಯತೆಯನ್ನು ಅಮೆರಿಕ ಪರಿಶೀಲಿಸುತ್ತಿದೆ. ಈ ದಾಳಿ ಇಂದೇ ನಡೆಯಬಹುದು ಎಂದು ಟ್ರಂಪ್ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಆದರೆ, ಸಂಭಾವ್ಯ ಮಿಲಿಟರಿ ಕಾರ್ಯಾಚರಣೆಯ ಸಮಯವನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.
ಇರಾನ್ನೊಂದಿಗೆ ಅಮೆರಿಕ ಸಮರ್ಥವಾಗಿ ವ್ಯವಹರಿಸಿದೆ ಎಂದು ಹೇಳಿದ ಟ್ರಂಪ್, ಈಗ ಕಾರ್ಯಾಚರಣೆಯನ್ನು ಪೂರ್ಣಗೊಳಿಸಬೇಕಾಗಬಹುದು ಅಥವಾ ಇರಾನ್ ಒಪ್ಪಂದಕ್ಕೆ ಬರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇರಾನ್ ಒಪ್ಪಂದಕ್ಕೆ ಬರುತ್ತದೆಯೇ ಎಂಬುದು ಖಚಿತವಿಲ್ಲ. ಆದರೆ, ಯಾವುದೇ ರೀತಿಯಲ್ಲಾದರೂ ಅಮೆರಿಕವೇ ಗೆಲ್ಲಲಿದೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ ಟ್ರಂಪ್, ಅಮೆರಿಕವು ಮತ್ತೊಂದು ಸಣ್ಣ ಪ್ರಮಾಣದ, ಆದರೆ ಭೀಕರವಾದ ದಾಳಿಯನ್ನು ನಡೆಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಫೆಬ್ರುವರಿ 28ರಂದು ಆರಂಭವಾದ ಇರಾನ್ ವಿರುದ್ಧದ ಅಮೆರಿಕ–ಇಸ್ರೇಲ್ ಜಂಟಿ ಕಾರ್ಯಾಚರಣೆಗೆ ‘ಎಪಿಕ್ ಫ್ಯೂರಿ’ (Epic Fury) ಎಂಬ ಹೆಸರನ್ನು ಬಳಸಲಾಗಿತ್ತು.




