ಐದು ದಿನಗಳ ಕಾಲ ರಾಜ್ಯದಲ್ಲಿ ಚಳಿ ಹೆಚ್ಚಳವಾಗುವ ಸಾಧ್ಯತೆ

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ದಿತ್ವಾ ಚಂಡಮಾರುತದ ಪರಿಣಾಮವಾಗಿ ಮುಂದಿನ ಐದು ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಇಳಕೆಯಾಗಿ ಚಳಿ ಹೆಚ್ಚಾಗಲಿದ್ದು, ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶನಿವಾರದಂದು ಬೆಂಗಳೂರು 16 ಡಿಗ್ರಿ ಸೆಲ್ಸಿಯಸ್, ಆಗುಂಬೆ 14.7, ಮೈಸೂರು 16.2, ಹೊನ್ನವಾರ 19.3, ಕಾರಾವಾರ 19.6, ಮಂಗಳೂರು 21.1, ಬೆಳಾಗಾವಿ 13, ಬೀದರ್ 12, ವಿಜಯಪುರ ಜಿಲ್ಲೆಯಲ್ಲಿ 12 ಡಿಗ್ರಿ ಸೆಲ್ಸಿಯಸ್ನಷ್ಟು ಕನಿಷ್ಟ ತಾಪಮಾನ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು 3 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ಇಳಕೆಯಾಗುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಬೆಳಗಿನ ಜಾವ ಮಂಜು ಬೀಳಲಿದೆ ಎಂದು ಹೇಳಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಹಗುರ ಮೋಡದ ವಾತಾವರಣದ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣ ಹವೆ ಮುಂದುವರಿಯಲಿದೆ. ಆದರೆ ಚಂಡಮಾರುತದ ಪ್ರಭಾವದಿಂದ ಡಿ.5ರವರೆಗೆ ಕೆಲ ಭಾಗಗಳಲ್ಲಿ ಹಗುರ ಮಳೆ ಮುಂದುವರಿಯುವ ಮುನ್ಸೂಚನೆ ಇದೆ. ಚಂಡಮಾರುತವು ಆಂದ್ರಾ ಕರಾವಳಿಯಿಂದ ಉತ್ತರ ಚಲಿಸುವ ಸಾಧ್ಯತೆಗಳಿಲ್ಲದ್ದರಿಂದ ಹಿಂಗಾರು ಸಂಪೂರ್ಣ ಹಿಂದೆ ಸರಿಯುವ ಲಕ್ಷಣಗಳಿಲ್ಲ ಎಂದು ತಿಳಿಸಿದೆ.
ರಾಜ್ಯದ ದಕ್ಷಿಣ ಒಳನಾಡಿನ ಚಾಮರಾಜನಗರ ಜಿಲ್ಲೆಯಲ್ಲಿ ತುಂತುರು ಮಳೆಯ ಮುನ್ಸೂಚನೆ ಇದ್ದು, ರಾಮನಗರ, ಬೆಂಗಳೂರು, ಕೋಲಾರ ಜಿಲ್ಲೆಗಳ ತಮಿಳುನಾಡು ಗಡಿಭಾಗಗಳಲ್ಲಿ ನಿರಂತರ ಹನಿ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಎರಡು-ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಚಳಿ ಹೆಚ್ಚಾಗಿದೆ.







