ವ್ಯಾಪಕ ವಿರೋಧದ ಹಿನ್ನೆಲೆ ವಿದ್ಯುತ್ ವಿತರಣೆ ವ್ಯವಸ್ಥೆ ಖಾಸಗೀಕರಣಕ್ಕೆ ತಡೆ

ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಅನುಮತಿ ಕೋರಿ ಖಾಸಗಿ ಕಂಪೆನಿಯೊಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‍ಸಿ)ದ ಮುಂದೆ ಸಲ್ಲಿಸಿದ್ದ ಪ್ರಸ್ತಾವಕ್ಕೆ, ರೈತರು-ಸಾರ್ವಜನಿಕರು ಹಾಗೂ ಎಸ್ಕಾಂ ನೌಕರರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತಡೆ ಬಿದ್ದಿದೆ.
ವಿದ್ಯುತ್ ಸರಬರಾಜು ಪರವಾನಗಿ ಕೋರಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‍ಸಿ)ಕ್ಕೆ ‘ಟಾಟಾ ಪವರ್ ಕಂಪೆನಿ ಲಿಮಿಟೆಡ್’ ಸಲ್ಲಿಸಿದ್ದ ತನ್ನ ಪ್ರಸ್ತಾವನೆಯನ್ನು ಕಂಪೆನಿ ಪರ ವಕೀಲರು, ಆಯೋಗದ ಕೋರ್ಟ್‍ಗೆ ಖುದ್ದು ಹಾಜರಾಗಿ ವಿಚಾರಣೆ ವೇಳೆ, ‘ವಿದ್ಯುತ್ ವಿತರಣೆ ಪರವಾನಗೆಗೆ ಸಂಬಂಧಪಟ್ಟ ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆಯಲಾಗುವುದು’ ಎಂದು ಪ್ರಕಟಿಸಿದ್ದಾರೆ. ಇದಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‍ಸಿ) ಒಪ್ಪಿಗೆ ನೀಡಿದೆ.
‘ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣಗೊಳ್ಳಲಿದೆ’ ಎಂಬ ಆತಂಕದಲ್ಲಿದ್ದ ರೈತರು ಹಾಗೂ ಸಾರ್ವಜನಿಕರು ಇದೀಗ ನಿರಾಳರಾಗಿದ್ದಾರೆ. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಇಂಧನ ಸಚಿವ ಕೆ.ಜೆ.ಜಾರ್ಜ್, ‘ವಿದ್ಯುತ್ ಖಾಸಗೀಕರಣ ಸಂಬಂಧ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.
‘ಬಿಜೆಪಿ ಸರಕಾರದ ಅವಧಿಯಲ್ಲಿ ವಿದ್ಯುತ್ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ತರಲಾಗಿತ್ತು. ಆದರೆ, ಇಲ್ಲಿಯವರೆಗೂ ವಿದ್ಯುತ್ ವಿತರಣೆ ಖಾಸಗೀಕರಣ ಆಗಿಲ್ಲ. ಇದೀಗ ಮತ್ತೆ ಖಾಸಗಿಕರಣಕ್ಕೆ ಕೆಇಆರ್‍ಸಿಗೆ ಪ್ರಸ್ತಾವನೆ ಬಂದಿತ್ತು. ಈ ಸಂಬಂಧ ಎಲ್ಲ ನಿಗಮಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದೇವೆ’ ಎಂದು ಜಾರ್ಜ್ ಸ್ಪಷ್ಟಣೆ ನೀಡಿದ್ದರು.
ರೈತರು, ಸಾರ್ವಜನಿಕರು ಹಾಗೂ ಎಸ್ಕಾಂ ನೌಕರರು ಮತ್ತು ಗುತ್ತಿಗೆದಾರರು ಸೇರಿದಂತೆ ಒಟ್ಟು 20 ಲಕ್ಷಕ್ಕೂ ಅಧಿಕ ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿದ್ದರು. ರೈತರು ಹಾಗೂ ಸಾರ್ವಜನಿಕರ ನಿರಂತರ ಹೋರಾಟದ ಫಲವಾಗಿ ಟಾಟಾ ಪವರ್ ಕಂಪೆನಿ ಲಿಮಿಟೆಡ್ ಅರ್ಜಿ ವಾಪಸ್ ಪಡೆದಿದ್ದು, ಈ ನಿರ್ಧಾರವನ್ನು ರೈತರು, ಎಸ್ಕಾಂ ನೌಕರರು ಸ್ವಾಗತಿಸಿದ್ದಾರೆ.






