ಧರ್ಮಸ್ಥಳ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕಿದ್ದ ರಾಜ್ಯ ಸರಕಾರ ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಂಡಿದೆ : ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ
ನವದೆಹಲಿ: ಧರ್ಮಸ್ಥಳ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕಿದ್ದ ರಾಜ್ಯ ಸರ್ಕಾರ ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಂಡಿದೆ. ಏನೊಂದೂ ಸಿಗದಿದ್ದಕ್ಕೆ ಸಿಎಂ ಈಗ ವರಸೆ ಬದಲಿಸುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಲ್ಪಿ ಸಭೆಯಲ್ಲಿ ʼಧರ್ಮಸ್ಥಳ ತನಿಖೆಯಲ್ಲಿ ಸರಕಾರದ ಪಾತ್ರವಿಲ್ಲ' ಎಂದಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವರು, ಎಸ್ಐಟಿ ರಚಿಸಿದ್ದು ತಾವೇ ಅಲ್ಲವೇ? ಎಂದು ತಿರುಗೇಟು ಕೊಟ್ಟಿದ್ದಾರೆ.
ಎಸ್ಐಟಿ ರಚಿಸಿ ತನಿಖೆಗೆ ಆದೇಶಿಸಿದ ಸಿಎಂ ಈಗ ಸರಕಾರದ ಪಾತ್ರವಿಲ್ಲವೆಂದು ಉಲ್ಟಾ ಹೊಡೆಯುತ್ತಿದ್ದಾರೆ. ಪರ-ವಿರೋಧ ಚರ್ಚೆಯ ನಡುವೆಯೇ ತರಾತುರಿಯಲ್ಲಿ ಎಸ್ಐಟಿ ರಚಿಸಿ ಉತ್ಖನನಕ್ಕೆ ಆದೇಶ ನೀಡಿದ್ದು ತಾವೇ ಅಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಮಣ್ಣು ಅಗೆದಿದ್ದೊಂದೇ ಬಂತು!: ಧರ್ಮಸ್ಥಳದ 13 ಉತ್ಖನನ ಮಾಡಿದ ಜಾಗಗಳಲ್ಲಿ ಈವರೆಗೂ ಮಣ್ಣು ಅಗೆದಿದ್ದೊಂದೇ ಬಂತು. ಅನಾಮಿಕ ಆರೋಪಿಸಿದಂತೆ ಏನೊಂದೂ ಗುರುತರ ಸಾಕ್ಷಿ, ಶವಗಳ ಅವಶೇಷ ಸಿಗದಾಯಿತು. ಹೀಗಾಗಿ ಸಿಎಂ ಈಗ ತಮ್ಮ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆಂಬ ಕಾರಣಕ್ಕೆ ʼಧರ್ಮಸ್ಥಳ ತನಿಖೆಯಲ್ಲಿ ಸರಕಾರದ ಪಾತ್ರವಿಲ್ಲ' ಎನ್ನುತ್ತಿದ್ದಾರೆಂದು ಸಚಿವ ಜೋಶಿ ಟೀಕಿಸಿದ್ದಾರೆ.
ಸಿಎಂ ಪಾತ್ರವಿಲ್ಲದೆ ಎಸ್ಐಟಿ ರಚನೆ ಆಯಿತಾ?: ಧರ್ಮಸ್ಥಳ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲದೆ ಎಸ್ಐಟಿ ರಚಿಸಲಾಯಿತೆ? ಎಂದು ಪ್ರಶ್ನಿಸಿದ ಜೋಶಿ, ಇಷ್ಟೆಲ್ಲಾ ಹೈಡ್ರಾಮಾ ಮಾಡುವ ಬದಲು ಸರಿಯಾಗಿ ಪೊಲೀಸ್ ತನಿಖೆ ನಡೆಸಬಹುದಿತ್ತು. ಆದರೆ ಅದೇನೋ ಅಗೆದು ಗುಡ್ಡೆ ಹಾಕುವ ಕೆಲಸ ಮಾಡಿದ್ದಾರೆ ಎಂದರು.
ಧರ್ಮಸ್ಥಳಕ್ಕೆ ತಲೆಮಾರಿನ ಇತಿಹಾಸವಿದೆ. ಈ ಪವಿತ್ರ ಕ್ಷೇತ್ರಕ್ಕೆ ಪ್ರತಿ ದಿನ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಆದರೆ ರಾಜ್ಯ ಸರಕಾರ ಜನರ ನಂಬಿಕೆ ವಿಚಾರದಲ್ಲಿ ಆಟವಾಡುತ್ತಿದೆ. ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದು, ತೀವ್ರ ಖಂಡನೀಯ ಎಂದಿದ್ದಾರೆ
ದಟ್ಟಾರಣ್ಯ ಪ್ರದೇಶದ ನೇತ್ರಾವತಿ ಸ್ನಾನಘಟ್ಟದ 13 ಭಾಗಗಳಲ್ಲಿ ಶವಗಳನ್ನು ಹೂತು ಹಾಕಿದೆ ಎಂದಿರುವ ಅನಾಮಿಕನ ಆರೋಪದ ಬಗ್ಗೆ ಪರ-ವಿರೋಧ ಚರ್ಚೆ ನಡುವೆಯೇಎಸ್ಐಟಿ ರಚಿಸಿ, ಈಗ ಉತ್ಖನನ ಜಾಗದಲ್ಲಿ ಏನೂ ಸಿಗದಿದ್ದರಿಂದ ʼಧರ್ಮಸ್ಥಳ ತನಿಖೆಯಲ್ಲಿ ಸರಕಾರದ ಪಾತ್ರವಿಲ್ಲ' ಎನ್ನುತ್ತಿರುವುದು ನಿಜಕ್ಕೂ ದುರಂತ ಹಾಗೂ ಖಂಡನೀಯ ಎಂದು ಹೇಳಿದ್ದಾರೆ.







