ಎನ್ಡಿಎಗೆ ಬಹುಮತ |‘ಮತಗಳ್ಳತನ ಆರೋಪ’ಕ್ಕೆ ಬಿಹಾರದ ಮತದಾರರ ಪ್ರತ್ಯುತ್ತರ : ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ : ಮತಗಳ್ಳತನ ಆರೋಪ ಮಾಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಬಿಹಾರ ಮತದಾರರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ದೋಣಿ. ರಾಹುಲ್ ಗಾಂಧಿ ತಮ್ಮೊಂದಿಗೆ ಮಿತ್ರಪಕ್ಷಗಳನ್ನೂ ಮುಳುಗಿಸುತ್ತಿದ್ದಾರೆ. ಮತಗಳ್ಳತನದ ಕುರಿತ ಆರೋಪದ ತಂತ್ರಗಾರಿಕೆಗೆ ಬಿಹಾರದ ಜನತೆ ಸೊಪ್ಪು ಹಾಕಲಿಲಲ್ಲ ಎಂದು ಹೇಳಿದರು.
ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಒಂದಂಕಿ ಫಲಿತಾಂಶಕ್ಕೂ ಪರದಾಡುವಂತಾಗಿದೆ. ರಾಹುಲ್ ಗಾಂಧಿ ತಮ್ಮ ಮಿತ್ರಪಕ್ಷಗಳ ಅಸ್ಥಿತ್ವವನ್ನೂ ಕಳೆಯುತ್ತಿದ್ದಾರೆ. ರಾಹುಲ್ ಗಾಂಧಿ ಯಾವಾಗಲೂ ಪರಮಾಣು ಮತ್ತು ಹೈಡ್ರೋಜನ್ ಬಾಂಬ್ಗಳ ಬಗ್ಗೆಯೇ ಮಾತನಾಡುತ್ತಿದ್ದರು. ಅವರು ಈ ಎಲ್ಲ ಬಾಂಬ್ಗಳನ್ನು ತಮ್ಮದೇ ಪಕ್ಷ ಮತ್ತು ಮಿತ್ರಪಕ್ಷಗಳ ಮೇಲೆ ಸ್ಫೋಟಿಸಿದ್ದಾರೆ ಎಂದು ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು.
ರಾಹುಲ್ ಗಾಂಧಿ ಇನ್ನಾದರೂ ದೇಶದ ಸಾಂವಿಧಾನಿಕ ಸಂಸ್ಥೆ ಮತ್ತು ವ್ಯವಸ್ಥೆಯ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ ಮಾಡುವುದನ್ನು ಬಿಡಬೇಕು. ಕಾಂಗ್ರೆಸ್ ಮತ್ತು ಮಹಾ ಘಟಬಂಧನ್ನ ಎಲ್ಲ ಆರೋಪಗಳನ್ನು ಬಿಹಾರದ ಜನ ತಿರಸ್ಕರಿಸಿದ್ದಾರೆ. ಇನ್ನಾದರೂ ಮತದಾರರನ್ನು, ಸಂವಿಧಾನವನ್ನು ಮತ್ತು ಸಂವಿಧಾನಿಕ ಸಂಸ್ಥೆಗಳನ್ನು ಗೌರವಿಸಲಿ ಎಂದು ಅವರು ತಿಳಿಸಿದರು.
ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಐತಿಹಾಸಿಕ ಗೆಲುವು ದಾಖಲಿಸಿದೆ. ಇದು ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ ನಾಯಕತ್ವಕ್ಕೆ ಮತದಾರರು ನೀಡಿದ ಜನಾದೇಶ. ಇದಕ್ಕಾಗಿ ಬಿಹಾರದ ಜನರಿಗೆ ಧನ್ಯವಾದ ಹೇಳುತ್ತೇನೆ ಎಂದರು .







