‘ಬಿಜೆಪಿಯ ರಾಜಕೀಯ ಪೂರ್ವ ಇತಿಹಾಸವನ್ನಾದರೂ ಅಧ್ಯಯನ ಮಾಡಲಿ’ : ಪ್ರಹ್ಲಾದ್ ಜೋಶಿ ವಿರುದ್ಧ ಬಿ.ಕೆ.ಹರಿಪ್ರಸಾದ್ ಆಕ್ರೋಶ

ಬಿ.ಕೆ.ಹರಿಪ್ರಸಾದ್/ಪ್ರಹ್ಲಾದ್ ಜೋಶಿ
ಬೆಂಗಳೂರು : ‘ದೇಶವನ್ನೇ ವಿಭಜನೆಯ ದುರಂತಕ್ಕೆ ತಳ್ಳಿದ ಮಹಮ್ಮದ್ ಅಲಿ ಜಿನ್ನಾ ಜೊತೆಗೆ ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಹೋಲಿಕೆ ಮಾಡುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಅಕ್ಷರಶಃ ರಾಜಕೀಯ ದ್ರಾಷ್ಟ್ಯತೆ, ಇತಿಹಾಸದ ಅಜ್ಞಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ವಿರುದ್ಧದ ದುರ್ಬುದ್ಧಿಯನ್ನು ತೋರಿಸುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಈ ದೇಶದ ಐಕ್ಯತೆ, ಅಖಂಡತೆ ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ರಕ್ತ, ಬೆವರು, ಬದುಕನ್ನೇ ತ್ಯಾಗ ಮಾಡಿದ ಪರಂಪರೆ ಕಾಂಗ್ರೆಸ್ ಪಕ್ಷದ್ದಾಗಿದೆ. ದೇಶಕ್ಕಾಗಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜೈಲು ಸೇರಿದ್ದಾರೆ, ಪ್ರಾಣ ಬಲಿದಾನ ಮಾಡಿದ್ದಾರೆ. ಆದರೆ, ಇಂದು ಅದೇ ಕಾಂಗ್ರೆಸ್ ಪಕ್ಷದ ನಾಯಕರನ್ನು ಜಿನ್ನಾಗೆ ಹೋಲಿಸುವ ಮೂಲಕ ಬಿಜೆಪಿ ನಾಯಕರು ತಮ್ಮ ರಾಜಕೀಯ ದಿವಾಳಿತನವನ್ನು ದೇಶದ ಮುಂದೆ ಬಯಲಿಗೆಳೆದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
‘ಅವಿಭಜಿತ ಬಂಗಾಳದಲ್ಲಿ ಮುಸ್ಲಿಂ ಲೀಗ್ ಜೊತೆಗೆ ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಮೈತ್ರಿ ಸರಕಾರ ನಡೆಸಿದ ಇತಿಹಾಸ ಜೋಷಿ ಮರೆತಂತಿದೆ. ದೇಶದ ವಿಭಜಕ ಜಿನ್ನಾಗೆ ‘ಜಾತ್ಯತೀತ ನಾಯಕನ’ ಬಿರುದು ಕೊಟ್ಟ ಅಡ್ವಾಣಿಯ ಹೇಳಿಕೆ ನೆನಪಿಲ್ಲವೇ?. ಬಿಜೆಪಿ ಪರಿವಾರದ ಅನೇಕರಿಂದ ಜಿನ್ನಾ ಕುರಿತ ಮೃದು ನಿಲುವುಗಳು ಹೊರಬಂದಿರುವುದೂ ಇತಿಹಾಸದಲ್ಲೇ ದಾಖಲಾಗಿದೆ. ಆದರೆ ಇತಿಹಾಸವನ್ನು ಆಯ್ದುಕೊಂಡು ಓದುವ ಬಿಜೆಪಿಗೆ ಸತ್ಯ ಎಂದಿಗೂ ಸಹ್ಯವಾಗುವುದಿಲ್ಲ. ಕಾಂಗ್ರೆಸ್ ವಿರುದ್ಧ ದೇಶಭಕ್ತಿಯ ಪ್ರಮಾಣಪತ್ರ ಹಂಚುವ ಬಿಜೆಪಿ ನಾಯಕರು ಮೊದಲು ತಮ್ಮ ಸೈದ್ಧಾಂತಿಕ ಮೂಲಗಳ ಇತಿಹಾಸವನ್ನಾದರೂ ಅಧ್ಯಯನ ಮಾಡಲಿ’ ಎಂದು ಅವರು ಸವಾಲು ಹಾಕಿದ್ದಾರೆ.
‘ಇಂದು ದೇಶ ಎದುರಿಸುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ, ಆರ್ಥಿಕ ಅಸ್ಥಿರತೆ ಮುಂತಾದ ನೈಜ ಸಮಸ್ಯೆಗಳ ಬಗ್ಗೆ ಉತ್ತರ ಕೊಡಲು ಸಾಧ್ಯವಾಗದ ಬಿಜೆಪಿ ನಾಯಕರು, ಇಂತಹ ಅಸಂಬದ್ಧ-ಪ್ರಚೋದನಕಾರಿ ಹೇಳಿಕೆಗಳ ಮೂಲಕ ಜನರ ಗಮನ ಬೇರೆಡೆ ತಿರುಗಿಸಲು ಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿ ದೇಶದ ಜನರನ್ನು ಜೋಡಿಸುವ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮಾತ್ರ ಚುನಾವಣೆಗೆ ಸಮಾಜವನ್ನು ಜಾತಿ, ಧರ್ಮ, ದ್ವೇಷ, ವಿಭಜನೆಯ ಕಾರ್ಖಾನೆಯಾಗಿ ಪರಿಣಮಿಸಿದೆ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
‘ದೇಶವನ್ನು ಒಗ್ಗೂಡಿಸುವ ರಾಜಕಾರಣ ಮಾಡುವವರು ಕಾಂಗ್ರೆಸ್ ನಾಯಕರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮೊದಲು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದಲಿ. ಅದು ಕಷ್ಟವಾದರೆ ಕನಿಷ್ಠ ಬಿಜೆಪಿಯ ರಾಜಕೀಯ ಪೂರ್ವ ಇತಿಹಾಸವನ್ನಾದರೂ ಅಧ್ಯಯನ ಮಾಡಲಿ. ಆಗ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಇರುವ ತಾತ್ವಿಕ ಹಾಗೂ ತ್ಯಾಗದ ಅಂತರವಾದರೂ ಅರ್ಥವಾಗುತ್ತದೆ’ ಎಂದು ಹರಿಪ್ರಸಾದ್ ಸಲಹೆ ನೀಡಿದ್ದಾರೆ.
ದೇಶವನ್ನೇ ವಿಭಜನೆಯ ದುರಂತಕ್ಕೆ ತಳ್ಳಿದ ಮಹಮ್ಮದ್ ಅಲಿ ಜಿನ್ನಾ ಜೊತೆಗೆ ದೇಶದ ವಿಪಕ್ಷ ನಾಯಕರಾದ @RahulGandhi ಅವರನ್ನು ಹೋಲಿಕೆ ಮಾಡುವ ಕೇಂದ್ರ ಸಚಿವ @JoshiPralhad ಯ ಹೇಳಿಕೆ ಅಕ್ಷರಶಃ ರಾಜಕೀಯ ದ್ರಾಷ್ಟ್ಯತೆ, ಇತಿಹಾಸದ ಅಜ್ಞಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ವಿರುದ್ಧದ ದುರ್ಬುದ್ಧಿಯನ್ನು ತೋರಿಸುತ್ತದೆ.
— Hariprasad.B.K. (@HariprasadBK2) May 18, 2026
ಈ ದೇಶದ ಐಕ್ಯತೆ,…






