ಜೈಲಿನಲ್ಲಿ ಪ್ರಜ್ವಲ್ ರೇವಣ್ಣಗೆ ಲೈಬ್ರರಿ ಕ್ಲರ್ಕ್ ಕೆಲಸ; ಸಂಬಳ ಎಷ್ಟು ಗೊತ್ತಾ?

ಪ್ರಜ್ವಲ್ ರೇವಣ್ಣ
ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಾರಾಗೃಹದ ನಿಯಮಾನುಸಾರ, ಜೈಲಿನಲ್ಲಿ ಕೈದಿಗಳಿಗೆ ವಿವಿಧ ಕೆಲಸಗಳನ್ನು ಹಂಚಲಾಗುತ್ತಿದ್ದು, ಪ್ರಜ್ವಲ್ ರೇವಣ್ಣಗೆ ಅಲ್ಲಿ ಗ್ರಂಥಾಲಯದ ಕ್ಲರ್ಕ್ ಕೆಲಸವನ್ನು ಜೈಲು ಅಧಿಕಾರಿಗಳು ನೀಡಿದ್ದಾರೆ.
ವಿಚಾರಣಾಧೀನ ಕೈದಿಗಳು ಹಾಗೂ ಸಜಾಬಂದಿಗಳಿಗೆ ಜೈಲಿನ ಗ್ರಂಥಾಲಯದಿಂದ ಪುಸ್ತಕ ವಿತರಣೆ ಮಾಡುವುದು, ಮತ್ತು ಯಾವ ಕೈದಿಗೆ ಯಾವ ಪುಸ್ತಕ ನೀಡಲಾಗಿದೆ ಎಂಬುದನ್ನು ದಾಖಲೆ ಮಾಡುವ ಹೊಣೆಗಾರಿಕೆಗಳಿವೆ. ಈ ಕೆಲಸಕ್ಕೆ ಪ್ರಜ್ವಲ್ಗೆ ಪ್ರತಿದಿನ 524 ರೂ. ಸಂಬಳವನ್ನು ನಿಗದಿಪಡಿಸಲಾಗಿದೆ.
‘ನೋಂದಣಿ ಮಾಡಿಕೊಂಡು ಕೆಲಸ ಮಾಡಿದ ದಿನದಂದು ಕೂಲಿ ಬರಲಿದೆ. ನ್ಯಾಯಾಲಯಕ್ಕೆ ಹಾಜರಾಗಬೇಕಾದ ದಿನಗಳಂದು ಹಣ ನೀಡಲಾಗುವುದಿಲ್ಲ’ ಎಂದು ಜೈಲಿನ ಮೂಲಗಳು ತಿಳಿಸಿವೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆಗಸ್ಟ್ 2ರಂದು ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.





