ಪ್ರಜ್ವಲ್ ರೇವಣ್ಣ ಪ್ರಕರಣ: ವಿಚಾರಣೆ ವರ್ಗಾವಣೆ ಮನವಿಗೆ ಸುಪ್ರೀಂ ಕೋರ್ಟ್ ತಿರಸ್ಕಾರ

ಪ್ರಜ್ವಲ್ ರೇವಣ್ಣ
ಹೊಸದಿಲ್ಲಿ, ಡಿ.11: ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂಬ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ಹಿಂದಿನ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಇದೇ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದರಿಂದ ತಟಸ್ಥತೆಗೆ ಅಡ್ಡಿಯಾಗಬಹುದು ಎಂಬ ವಾದವನ್ನು ರೇವಣ್ಣ ಪರ ವಕೀಲರು ಮಂಡಿಸಿದ್ದರು. ಆದರೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠ, ವಿಚಾರಣಾ ದಾಖಲೆಗಳ ಆಧಾರದಲ್ಲಿ ನ್ಯಾಯಾಧೀಶರು ಮಾಡಿದ ಅವಲೋಕನಗಳನ್ನು ಪಕ್ಷಪಾತದ ಸೂಚನೆ ಎಂದು ಕರೆಯಲು ಆಧಾರವಿಲ್ಲ ಎಂದು ಸ್ಪಷ್ಟಪಡಿಸಿತು.
“ಹಿಂದಿನ ಪ್ರಕರಣದಲ್ಲಿನ ಪ್ರಕರಣಗಳನ್ನು ಪರಿಗಣಿಸಲಾಗುವುದಿಲ್ಲ. ಈಗಿನ ವಿಚಾರಣೆ ಸಂಪೂರ್ಣವಾಗಿ ದಾಖಲೆಯಲ್ಲಿರುವ ಸಾಕ್ಷ್ಯಾಧಾರಗಳ ಮೇಲೇ ನಿರ್ಧಾರವಾಗಲಿದೆ,” ಎಂದು ಸಿಜೆಐ ಕಾಂತ್ ಆದೇಶದಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ಈ ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದರಿಂದ, ರೇವಣ್ಣ ಸುಪ್ರೀಂ ಕೋರ್ಟ್ ಮೊರೆಹೋದಿದ್ದರು.
ಐಪಿಸಿ ಸೆಕ್ಷನ್ 376(2)(n), 354A, 354B, 354C, 506, 201 ಹಾಗು ಐಟಿ ಕಾಯ್ದೆಯ ಸೆಕ್ಷನ್ 66ಇ ಅಡಿಯಲ್ಲಿ ರೇವಣ್ಣ ವಿರುದ್ಧ ಆರೋಪಗಳು ಬಾಕಿ ಇದ್ದು, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತೋರಿಸುವ 2,900 ಕ್ಕೂ ಹೆಚ್ಚು ವೀಡಿಯೊಗಳು ಹೊರಬಂದ ನಂತರ ದಾಖಲಾಗಿದ್ದ ನಾಲ್ಕು ಪ್ರಕರಣಗಳಲ್ಲಿ ಇವು ಎರಡನೆಯದು.
ಈ ವರ್ಷದ ಆಗಸ್ಟ್ನಲ್ಲಿ, ಕುಟುಂಬದ ಮನೆ ಕೆಲಸದಾಕೆಯ ಮೇಲೆ ಪದೇಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಆ ತೀರ್ಪಿನ ಮೇಲ್ಮನವಿ ಹೈಕೋರ್ಟ್ನಲ್ಲಿ ಬಾಕಿ ಇದೆ.
ವಿಚಾರಣಾ ನ್ಯಾಯಾಧೀಶರ ಕೆಲವು ಅವಲೋಕನಗಳ ವಿರುದ್ಧ ರೇವಣ್ಣ ಪರ ಹಿರಿಯ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗ, ಸಿಜೆಐ ಸೂರ್ಯಕಾಂತ್, “ನ್ಯಾಯಾಲಯದಲ್ಲಿ ಹಲವಾರು ಕಾಲ್ಪನಿಕ ಸನ್ನಿವೇಶಗಳನ್ನು ಉದಾಹರಣೆಗೆ ಹೇಳಲಾಗುತ್ತದೆ. ಅದನ್ನು ನ್ಯಾಯಾಧೀಶರ ವಿರುದ್ಧದ ಆರೋಪಗಳಾಗಿ ಪರಿವರ್ತಿಸುವುದು ಸರಿಯಲ್ಲ. ತಪ್ಪುಗಳಾಗಿದೆಯಾದರೆ ನಾವು ಸ್ವತಃ ತಿದ್ದಿಕೊಳ್ಳುತ್ತೇವೆ,” ಎಂದು ಹೇಳಿದರು.
ವಕೀಲರ ಬದಲಾವಣೆಯನ್ನು ಉಲ್ಲೇಖಿಸಿ ವಿಚಾರಣಾ ನ್ಯಾಯಾಲಯ ಮಾಡಿದ ಟಿಪ್ಪಣಿಗಳನ್ನು ರದ್ದುಪಡಿಸುವ ಮನವಿಯನ್ನೂ ಪೀಠ ನಿರಾಕರಿಸಿತು.
“ವಕೀಲರನ್ನು ಗದರಿಸುವ ಉದ್ದೇಶ ನ್ಯಾಯಾಲಯಕ್ಕೆ ಇಲ್ಲ. ಆದರೆ ವೃತ್ತಿಪರ ನೈತಿಕತೆಯ ಪಾಲನೆಯೂ ಅವಶ್ಯ. ಅಗತ್ಯವಿದ್ದರೆ ಹೈಕೋರ್ಟ್ ಮುಂದೆ ಕ್ಷಮೆಯಾಚಿಸಬಹುದು,” ಎಂದು ನ್ಯಾಯಾಲಯ ಸೂಚನೆ ನೀಡಿತು.







