ಅಮಿತ್ ಶಾ ಹಸಿ ಸುಳ್ಳಿನ ಪಿತಾಮಹ : ಪ್ರಕಾಶ್ ರಾಜ್ ವಾಗ್ದಾಳಿ

ಬೆಂಗಳೂರು : ದೇಶದಲ್ಲಿ ಮೂರು ಕೋಟಿ ನುಸುಳುಕೋರರಿದ್ದಾರೆ ಎಂದು ಹೈದರಾಬಾದ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರಿಗೆ ಕಿಂಚಿತ್ತಾದರೂ ನಾಚಿಕೆ ಮಾನ-ಮರ್ಯಾದೆ ಇದೆಯೇ?, ಅವರು ಹಸಿ ಹಸಿ ಸುಳ್ಳಿನ ಪಿತಾಮಹ ಎಂದು ಬಹುಭಾಷಾ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದರು.
ಗುರುವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಇಂಡಿಯಾ ಒಕ್ಕೂಟದಿಂದ ನಡೆದ ‘ಮತ ಉಳಿಸಿ ದೇಶ ಉಳಿಸಿ’ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆದಿವಾಸಿಗಳು, ದಲಿತರು, ಮುಸ್ಲಿಮರ ಹೆಸರನ್ನು ಎಸ್ಐಆರ್ ಪಟ್ಟಿಯಿಂದ ತೆಗೆದುಹಾಕಲಾಗಿದೆ, ಇದನ್ನು ನಾವು ರುಜುವಾತು ಪಡಿಸಲು ಸಿದ್ದರಿದ್ದೇವೆ. ನ್ಯಾಯಾಧೀಶರ ಎದುರು ಚುನಾವಣಾ ಆಯೋಗ ಸುಳ್ಳನ್ನು ಹೇಳುತ್ತಿದೆ. ಯಾಕೆ, ನ್ಯಾಯಾಲಯಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ? ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
ಎಸ್ಐಆರ್ ಎನ್ನುವುದು ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಪ್ರಕ್ರಿಯೆ. ಎಲ್ಲ ವಿರೋಧ ಪಕ್ಷಗಳು, ಪ್ರಜೆಗಳಾದಿಯಾಗಿ ಇದರ ವಿರುದ್ಧ ಹೋರಾಡಬೇಕು. ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾ ಮಾಡಿದರೆ ಸಾಲದು. ಎಸ್ಐಆರ್ ಪ್ರಕ್ರಿಯೆಯನ್ನೇ ನಿಲ್ಲಿಸಬೇಕು ಎಂದು ಪ್ರಕಾಶ್ ರಾಜ್ ಆಗ್ರಹಿಸಿದರು.
ರಾಜ್ಯ ಸರಕಾರ ಎಸ್ಐಆರ್ ಬಹಿಷ್ಕರಿಸಲಿ: ‘ಎಲ್ಲಿಯವರೆಗೆ ಆಯಾಯ ರಾಜ್ಯಗಳಲ್ಲಿ ನಾವು ಎಸ್ಐಆರ್ ಅನ್ನು ಒಪ್ಪುವುದಿಲ್ಲ, ಬಹಿಷ್ಕರಿಸುತ್ತೇವೆ ಎಂದು ಹೇಳುವುದಿಲ್ಲವೋ, ಎಲ್ಲಿಯವರೆಗೆ ಕಾಂಗ್ರೆಸ್, ಪ್ರತಿಯೊಂದು ಬೂತ್ಗೆ ತೆರಳಿ ಮತಪರೀಕ್ಷೆಯನ್ನು ಮಾಡುವುದಿಲ್ಲವೋ, ಅಲ್ಲಿಯವರೆಗೆ, ಈ ಸಮಸ್ಯೆ ಮುಗಿಯುವುದಿಲ್ಲ. ಹಾಗಾಗಿ ಕರ್ನಾಟಕದ ಕಾಂಗ್ರೆಸ್ ಸರಕಾರ ಎಸ್ಐಆರ್ ಅನ್ನು ಬಹಿಷ್ಕರಿಸಿ ನಿರ್ಣಯ ಕೈಗೊಳ್ಳಬೇಕು’ ಎಂದು ಪ್ರಕಾಶ್ ರಾಜ್ ಎಚ್ಚರಿಸಿದರು.






