ಮಂಕಿಪಾಕ್ಸ್, ಝಿಕಾ ವೈರಸ್ ಭೀತಿ: ಮುಂಜಾಗೃತೆ ವಹಿಸಲು ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ
ಕೇಂದ್ರ ಸರ್ಕಾರದ ಸೂಚನೆಯಂತೆ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾ

Photo:X/@dineshgrao
ಬೆಂಗಳೂರು: ಹೊರದೇಶಗಳಲ್ಲಿ ಮಂಕಿಪಾಕ್ಸ್ ವೈರಸ್ ಕಂಡಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಆರೋಗ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂಜಾಗೃತೆ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಪ್ರಾದೇಶಿಕ ನಿರ್ದೇಶಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಕುರಿತು ಚರ್ಚೆ ನಡೆಸಿದ ಸಚಿವರು, ವಿಮಾನ ನಿಲ್ದಾಣ ಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ರಾಜ್ಯದ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದು ವೇಳೆ ಮಂಕಿಪಾಕ್ಸ್ ವೈರಸ್ ಪತ್ತೆಯಾದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾಸ್ಪತ್ರೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲಿ ವೈದ್ಯರಿಗೆ ತರಬೇತಿ ನೀಡಬೇಕು. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಇಲ್ಲಿಯ ವರೆಗೆ ಮಂಕಿಪಾಕ್ಸ್ ಬಂದಿಲ್ಲ. ಮೆಡಿಕಲ್ ಎಮೆರ್ಜನ್ಸಿ ಘೋಷಿಸುವ ಪರಿಸ್ಥಿತಿ ಇಲ್ಲ. ಆದರೆ ಹೊರದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮೆಡಿಕಲ್ ಎಮೆರ್ಜೆನ್ಸಿ ಘೋಷಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿ ಈಗಿನಿಂದಲೇ ಮುಂಜಾಗೃತೆ ವಹಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಿ ಎಂದು ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಒಟ್ಟು 9 ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಝಿಕಾ ಹೆಚ್ಚಾಗಿ ಕಂಡುಬಂದಿರುವ ಸ್ಥಳಗಳಲ್ಲಿ ಹೆಚ್ಚಿನ ತಪಾಸಣೆ ನಡೆಸಿ. ಶಿವಮೊಗ್ಗ 3 ಹಾಗೂ ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6 ಜನರಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಬೆಂಗಳೂರಿನ ಜಿಗಣಿಯಲ್ಲಿ 5 ಮಹಿಳೆಯರಲ್ಲಿ ಝಿಕಾ ವೈರಸ್ ಪತ್ತೆಯಾಗಿದ್ದು, ವೈರಸ್ ಗೆ ತುತ್ತಾದ ಗರ್ಭಿಣಿಯರ ಆರೈಕೆಗೆ ಹೆಚ್ಚಿನ ಒತ್ತು ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಅವರ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಸಲು ಹೇಳಿದ ಅವರು, ಜಿಗಣಿ ಪ್ರದೇಶದ ಸುತ್ತಮುತ್ತ ಹೆಚ್ಚಿನ ಮೇಲ್ವೀಚಾರಣೆ ನಡೆಸುವಂತೆ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Chaired an important meeting today at Vikasa Soudha with Health Department officials to discuss precautionary measures against Monkeypox, which has been declared a public health emergency of international concern by WHO.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 19, 2024
Officials including Principal Secretary, Commissioner, and… pic.twitter.com/Ka40QMjpvA