ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ; ಕರ್ನಾಟಕ ಹೆರಿಟೇಜ್ ಅಂಡ್ ಕಲ್ಚರಲ್ ಫೌಂಡೇಶನ್ ಸ್ಥಾಪನೆ : ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು : ರಾಜ್ಯದ ಐತಿಹಾಸಿಕ ಸ್ಮಾರಕಗಳು, ಪುರಾತತ್ವ ತಾಣಗಳು, ವಸ್ತು ಸಂಗ್ರಹಾಲಯಗಳು ಹಾಗೂ ಸಾಂಸ್ಕೃತಿಕ ಸಂಪತ್ತಿನ ಸಂರಕ್ಷಣೆಯನ್ನು ವ್ಯವಸ್ಥಿತಗೊಳಿಸುವುದರ ಜೊತೆಗೆ, ರಾಜ್ಯದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ‘ಕರ್ನಾಟಕ ಹೆರಿಟೇಜ್ ಅಂಡ್ ಕಲ್ಚರಲ್ ಫೌಂಡೇಶನ್’ ಸ್ಥಾಪಿಸುವ ಕುರಿತು ರಾಜ್ಯ ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಮಂಗಳವಾರ ಈ ಸಂಬಂಧ ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಸಂಪುಟದ ಮುಂದೆ ಸಲ್ಲಿಸಲಾಗುವುದು. ರಾಜ್ಯದಲ್ಲಿ ಜಾರಿಯಲ್ಲಿರುವ ‘ಅಡಾಪ್ಟ್ ಎ ಮಾನ್ಯುಮೆಂಟ್’(ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆಯುವ) ಯೋಜನೆಗೆ ದೊರೆತಿರುವ ಉತ್ತಮ ಸ್ಪಂದನೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೇ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಪುನಶ್ಚೇತನ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರದ ಜೊತೆಗೆ ಖಾಸಗಿ ವಲಯ ಮತ್ತು ಸಾರ್ವಜನಿಕರ ಸಹಭಾಗಿತ್ವವನ್ನು ಬಳಸಿಕೊಳ್ಳುವುದು ಫೌಂಡೇಶನ್‍ನ ಪ್ರಮುಖ ಉದ್ದೇಶವಾಗಿದೆ. ರಾಜ್ಯದ 239 ತಾಲೂಕುಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಸುಮಾರು ಒಂದು ಲಕ್ಷ ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ತಾಣಗಳು ಗುರುತಿಸಲ್ಪಟ್ಟಿವೆ. ಇಂತಹ ವಿಶಾಲ ಐತಿಹಾಸಿಕ ಸಂಪತ್ತಿನ ಸಂರಕ್ಷಣೆಗೆ ದೀರ್ಘಕಾಲಿಕ ಮತ್ತು ಸ್ಥಿರವಾದ ಹಣಕಾಸು ವ್ಯವಸ್ಥೆಯ ಅಗತ್ಯವಿದೆ ಎಂದು ಜಾರ್ಜ್ ಹೇಳಿದ್ದಾರೆ.
ಸಿಎಸ್‍ಆರ್, ಎನ್‍ಆರ್ ಐ ಹಾಗೂ ಸಾರ್ವಜನಿಕರ ಸಹಭಾಗಿತ್ವ: ಪ್ರಸ್ತಾವಿತ ಕರ್ನಾಟಕ ಹೆರಿಟೇಜ್ ಅಂಡ್ ಕಲ್ಚರಲ್ ಫೌಂಡೇಶನ್ ಮೂಲಕ ಸಿಎಸ್‍ಆರ್ ಅನುದಾನ, ಅನಿವಾಸಿ ಭಾರತೀಯರ (ಎನ್‍ಆರ್ ಐ) ಕೊಡುಗೆ ಹಾಗೂ ಸಾರ್ವಜನಿಕರ ದೇಣಿಗೆಗಳನ್ನು ಪಾರದರ್ಶಕ ವ್ಯವಸ್ಥೆಯಡಿ ಒಗ್ಗೂಡಿಸುವ ಉದ್ದೇಶ ಹೊಂದಲಾಗಿದೆ. ದಾನಿಗಳು ತಮಗೆ ಆಸಕ್ತಿಯಿರುವ ನಿರ್ದಿಷ್ಟ ಸ್ಮಾರಕ, ಪುರಾತತ್ವ ತಾಣ ಅಥವಾ ವಸ್ತುಸಂಗ್ರಹಾಲಯದ ಸಂರಕ್ಷಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಾರ್ಜ್ ತಿಳಿಸಿದ್ದಾರೆ.
ಸಂರಕ್ಷಣೆಯೊಂದಿಗೆ ಸಂಸ್ಕೃತಿಯ ಪ್ರಚಾರ: ಈ ಫೌಂಡೇಶನ್ ಕೇವಲ ಸ್ಮಾರಕಗಳ ಸಂರಕ್ಷಣೆಗೆ ಸೀಮಿತವಾಗದೆ, ಆಯಾ ಸ್ಮಾರಕಗಳ ಕಲೆ, ಸಾಹಿತ್ಯ, ವಾಸ್ತುಶಿಲ್ಪ, ಜನಪದ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ದೇಶ-ವಿದೇಶಗಳಲ್ಲಿ ಪರಿಚಯಿಸುವ ವೇದಿಕೆಯಾಗುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದ್ದಾರೆ.
ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ತಮಗೆ ಇಷ್ಟವಿರುವಂತಹ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಸಹಾಯವನ್ನು ನೀಡುವಂತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿನಿಮಯ ಚಟುವಟಿಕೆಗಳು ಮತ್ತು ಕರ್ನಾಟಕದ ಪರಂಪರೆಯ ಪ್ರಚಾರದಲ್ಲಿ ತೊಡಗಿಸಿಕೊಂಡು ಸಾಂಸ್ಕೃತಿಕ ರಾಯಭಾರಿಗಳಾಗಿ ರೂಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಯುವಜನರು ತಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಕೇವಲ ಪಠ್ಯಪುಸ್ತಕಗಳ ಮೂಲಕ ತಿಳಿದುಕೊಳ್ಳುವುದಕ್ಕಿಂತ, ಸ್ಮಾರಕಗಳು, ಕಲೆ ಮತ್ತು ಸ್ಥಳೀಯ ಪರಂಪರೆಯೊಂದಿಗೆ ನೇರವಾಗಿ ಸಂಪರ್ಕ ಹೊಂದುವಂತಹ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗುವುದು. ಫೌಂಡೇಶನ್‍ನ ಹಣಕಾಸು ನಿರ್ವಹಣೆ, ಲೆಕ್ಕಪತ್ರ, ಆಡಿಟ್ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಖಚಿತಪಡಿಸುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಜಾರ್ಜ್ ತಿಳಿಸಿದ್ದಾರೆ.
ಕರ್ನಾಟಕದ ಸ್ಮಾರಕಗಳು ಕೇವಲ ಕಲ್ಲು ಮತ್ತು ಕಟ್ಟಡಗಳಲ್ಲ; ಅವು ನಮ್ಮ ಇತಿಹಾಸ, ಕಲೆ ಮತ್ತು ಗುರುತಿನ ಜೀವಂತ ಸಾಕ್ಷಿಗಳಾಗಿವೆ. ಅವುಗಳನ್ನು ಸಂರಕ್ಷಿಸುವುದರ ಜೊತೆಗೆ, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸಬೇಕಿದೆ. ಸರಕಾರದ ಪ್ರಯತ್ನಗಳಿಗೆ ಸಿಎಸ್‍ಆರ್ ಸಂಸ್ಥೆಗಳು, ಅನಿವಾಸಿ ಭಾರತೀಯರು, ಜಾಗತಿಕ ಕನ್ನಡಿಗರು ಮತ್ತು ಸಾರ್ವಜನಿಕರ ಸಹಭಾಗಿತ್ವವನ್ನು ಜೋಡಿಸುವ ಹೊಸ ಮಾದರಿಯಾಗಿ ಕರ್ನಾಟಕ ಹೆರಿಟೇಜ್ ಅಂಡ್ ಕಲ್ಚರಲ್ ಫೌಂಡೇಶನ್ ಅನ್ನು ರೂಪಿಸುವ ಉದ್ದೇಶ ಹೊಂದಿದ್ದೇವೆ. ಮುಂದಿನ ಪೀಳಿಗೆ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವಂತಾಗಬೇಕು.
-ಕೆ.ಜೆ.ಜಾರ್ಜ್, ಪ್ರವಾಸೋದ್ಯಮ ಸಚಿವ
ರಾಜ್ಯದಾದ್ಯಂತ ಹರಡಿರುವ ಐತಿಹಾಸಿಕ ಸ್ಮಾರಕಗಳ ಪ್ರಮಾಣ ಮತ್ತು ವೈವಿಧ್ಯತೆಯನ್ನು ಗಮನಿಸಿದರೆ, ಸಂರಕ್ಷಣೆಗೆ ಸರಕಾರ ಮತ್ತು ಸಮಾಜದ ಜಂಟಿ ಜವಾಬ್ದಾರಿಯ ಅಡಿಯಲ್ಲಿ ದೀರ್ಘಕಾಲಿಕ ಸಂಪನ್ಮೂಲಗಳನ್ನು ರೂಪಿಸುವ ಅಗತ್ಯವಿದೆ. ಕೆಎಚ್‍ಸಿಎಫ್ ಮೂಲಕ ದಾನಿಗಳು ತಮಗೆ ಆಸಕ್ತಿಯಿರುವ ತಾಣಗಳೊಂದಿಗೆ ನೇರವಾಗಿ ಸಂಪರ್ಕ ಹೊಂದುವಂತೆ ಮಾಡುವುದರ ಜೊತೆಗೆ, ಹಣಕಾಸು ನಿರ್ವಹಣೆ ಮತ್ತು ಯೋಜನೆಗಳ ಅನುಷ್ಠಾನಕ್ಕೆ ಸ್ಪಷ್ಟವಾದ ಪಾರದರ್ಶಕ ವ್ಯವಸ್ಥೆ ರೂಪಿಸಲಾಗುವುದು.
-ಡಾ.ರಾಮ್ ಪ್ರಸಾತ್ ಮನೋಹರ್, ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ






