ʼಸಚಿವ ಸಂಪುಟ ಪುನರ್ ರಚನೆಗೆ ಪಟ್ಟುʼ | ದಿಲ್ಲಿಯಲ್ಲಿ ವರಿಷ್ಠರ ಭೇಟಿಗೆ ಬೀಡುಬಿಟ್ಟ 30 ಮಂದಿ ‘ಕೈʼ ಶಾಸಕರು

ಸಿಎಂ ಸಿದ್ದರಾಮಯ್ಯ/ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಬೆನ್ನಲ್ಲೇ ಸಂಪುಟ ಪುನರ್ ರಚನೆ ಮಾಡಬೇಕೆಂದು ಹಿರಿಯ ಶಾಸಕರ ಒತ್ತಡ ಹೇರುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.
‘ರಾಜ್ಯ ಸರಕಾರಕ್ಕೆ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೊಡಿ’ ಎಂದು ಮೂವತ್ತು ಮಂದಿ ಹಿರಿಯ ಶಾಸಕರು ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿದ್ದು, ವರಿಷ್ಠರ ಭೇಟಿಯ ನಿರೀಕ್ಷೆಯಲ್ಲಿದ್ದಾರೆ. ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಾಗಬೇಕು ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ.
ಈ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಮ್ಮ ಶಾಸಕರು ಪಕ್ಷದ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನು ಇಲ್ಲ. ಹೈಕಮಾಂಡ್ ಒಪ್ಪಿಗೆ ನೀಡಿದರೆ ಸಂಪುಟ ಪುನರ್ ರಚನೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
ಶಿಸ್ತನ್ನು ಯಾರೂ ಮೀರಬೇಡಿ: ಮತ್ತೊಂದೆಡೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ‘ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ. ಪಕ್ಷದ ಚೌಕಟ್ಟಿನ ಒಳಗೆ ಎಲ್ಲ ಶಾಸಕರು ಮಾತನಾಡಬೇಕು. ಕೆಲವರು ಏನೇನು ಮಾತನಾಡಿದ್ದಾರೋ ಎಲ್ಲವನ್ನೂ ಗಮನಿಸಿದ್ದೇನೆ. ಆದರೆ ಮಾಧ್ಯಮಗಳೇ ನಿಮ್ಮ ಭವಿಷ್ಯ ಅಲ್ಲ, ಪಕ್ಷ ನಿಮ್ಮ ಭವಿಷ್ಯ. ಪಾರ್ಟಿಯಲ್ಲೇ ಎಲ್ಲರ ಭವಿಷ್ಯವಿದೆ, ಪಕ್ಷದ ಚೌಕಟ್ಟಿನೊಳಗೆ ಇರಬೇಕು’ ಎಂದು ಎಚ್ಚರಿಸಿದ್ದಾರೆ.
ಈ ನಡುವೆ ಹೊಸದಿಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಹಿರಿಯ ಶಾಸಕ ಅಶೋಕ್ ಪಟ್ಟಣ್, ಸಚಿವ ಸಂಪುಟ ಪುನರ್ ರಚನೆ ಮಾಡಬೇಕೆಂದು ಆಗ್ರಹಿಸಿ 30 ಮಂದಿ ಶಾಸಕರು ದಿಲ್ಲಿಗೆ ಆಗಮಿಸಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿದ್ದೇವೆ ಎಂದರು.
‘ಪದೇ ಪದೇ ಸಚಿವರು ಆಗಿರುವವರೇ ಸಚಿವರು ಆಗುತ್ತಾರೆ. ಆದರೆ, ಹೊಸಬರಿಗೆ, ನಾಲ್ಕೈದು ಬಾರಿ ಆಯ್ಕೆಯಾಗಿರುವ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ. ಹೀಗಾಗಿ ನಾಲ್ಕೈದು ಬಾರಿ ಆಯ್ಕೆಯಾದ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬುದು ನಮ್ಮ ಒಂದು ಅಂಶದ ಬೇಡಿಕೆ. ಹೀಗಾಗಿಯೇ ನಾವೆಲ್ಲರೂ ದಿಲ್ಲಿಗೆ ಬಂದಿದ್ದೇವೆ’ ಎಂದು ಅಶೋಕ್ ಪಟ್ಟಣ್ ತಿಳಿಸಿದರು.
ಸಿಎಂ ಸ್ಥಾನದ ಬದಲಾವಣೆ ವಿಚಾರವು ನಮಗೆ ಸಂಬಂಧಿಸಿದ್ದಲ್ಲ. ಆ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ನಾವು ದಿಲ್ಲಿಗೆ ಬರುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಿದ್ದೇವೆ ಎಂದು ಅಶೋಕ್ ಪಟ್ಟಣ್ ತಿಳಿಸಿದರು.
ಹಿರಿಯ ಶಾಸಕರಾದ ಪುಟ್ಟರಂಗಶೆಟ್ಟಿ, ಟಿ.ಬಿ.ಜಯಚಂದ್ರ, ಕೆ.ಷಡಕ್ಷರಿ, ಎ.ಆರ್.ಕೃಷ್ಣಮೂರ್ತಿ, ಎಸ್.ಎನ್.ನಾರಾಯಣಸ್ವಾಮಿ, ಡಿ.ಜಿ.ಶಾಂತನಗೌಡ, ಗೋಪಾಲಕೃಷ್ಣ ಬೇಳೂರು ಸೇರಿದಂತೆ 30 ಮಂದಿ ಶಾಸಕರು ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ.






