ಮೇಜರ್ ಸ್ವಾತಿ ಶಾಂತಕುಮಾರ್ಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ

ಸ್ವಾತಿ ಶಾಂತಕುಮಾರ್
ಬೆಂಗಳೂರು : ಬೆಂಗಳೂರು ಮೂಲದ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತಕುಮಾರ್ ಅವರನ್ನು ವಿಶ್ವಸಂಸ್ಥೆ ನೀಡುವ ಪ್ರತಿಷ್ಠಿತ ‘ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ-2025’ಗೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಪ್ರಕಟಿಸಿದ್ದಾರೆ.
ರವಿವಾರ ಈ ಸಂಬಂಧ ಅಧಿಕೃತವಾಗಿ ಪ್ರಶಸ್ತಿ ಪ್ರಕಟಿಸಿರುವ ಅವರು, ದೇಶದ ವಿವಿಧೆಡೆ ಅತ್ಯುತ್ತಮ ಕಾರ್ಯಾಚರಣೆ ಮತ್ತು ಸೇವೆ ಸಲ್ಲಿಸಿದ ಸೇನಾ ಅಧಿಕಾರಿಗಳನ್ನು ಗುರುತಿಸಿ ವಿಶ್ವಸಂಸ್ಥೆಯು ಈ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ, ಸ್ವಾತಿ ಶಾಂತಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸ್ವಾತಿ ಶಾಂತಕುಮಾರ್ ಅವರು ಯುದ್ಧ ಪೀಡಿತ ದಕ್ಷಿಣ ಸುಡಾನ್ನಲ್ಲಿ ಮಹಿಳೆಯರ ರಕ್ಷಣೆ, ಸಮುದಾಯದ ನೆಮ್ಮದಿಗಾಗಿ ನಡೆಸಿದ ಕಾರ್ಯಕ್ರಮಗಳಿಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ‘ಸಮಾನ ಪಾಲುದಾರಿಕೆ-ಶಾಶ್ವತ ಶಾಂತಿ’ ಎಂಬುದು ಸ್ವಾತಿ ಅವರ ಧ್ಯೇಯವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರಶಸ್ತಿಗೆ ಶಾಂತಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿರುವವರ ಹೆಸರುಗಳ ಪಟ್ಟಿ ಮಾಡಲಾಗಿತ್ತು. ಹಲವಾರು ಹೆಸರುಗಳನ್ನು ನಾಮನಿರ್ದೇಶನವನ್ನು ಮಾಡಲಾಗಿತ್ತು. ಆ ಪೈಕಿ, ಅಂತಿಮ ಪಟ್ಟಿಗೆ ನಾಲ್ವರನ್ನು ಆಯ್ಕೆ ಮಾಡಿದ್ದು, ನಾಲ್ವರಲ್ಲಿ ಯಾರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಮತದಾನ ನಡೆದಿತ್ತು. ಅತ್ಯಧಿಕ ಮತಗಳು ಸ್ವಾತಿ ಅವರಿಗೆ ಬಂದಿದ್ದು, ಅಂತಿಮವಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿವೆ.
ಸ್ವಾತಿ ಶಾಂತಕುಮಾರ್ ಅವರು ಬೆಂಗಳೂರು ನಗರದ ಲಿಂಗರಾಜಪುರ ಮೂಲದವರು. ಇಂಜಿನಿಯರಿಂಗ್ ಪದವಿ ಪಡೆದಿದ್ದು, ಎಂಟು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದೂವರೆ ವರ್ಷದಿಂದ ದಕ್ಷಿಣ ಸುಡಾನ್ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.







