ಎಸೆಸೆಲ್ಸಿಯಲ್ಲಿ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳೂ ಶೇ.33 ಅಂಕ ಗಳಿಸಿದರೆ ಉತ್ತೀರ್ಣ : ಪರಿಷ್ಕೃತ ಸುತ್ತೋಲೆ ಪ್ರಕಟ

ಸಾಂದರ್ಭಿಕ ಚಿತ್ರ
ಬೆಂಗಳೂರು : ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಸಹ ಎಲ್ಲ ವಿಷಯಗಳಲ್ಲಿ ಒಟ್ಟಾರೆ ಶೇ.33 ಅಂದರೆ 625 ಅಂಕಗಳಿಗೆ ಕನಿಷ್ಠ 206 ಅಂಕ ಗಳಿಸಬೇಕು ಎಂದು ರಾಜ್ಯ ಸರಕಾರ ತಿಳಿಸಿದೆ.
ಮಂಗಳವಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು, ಎಸೆಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಶಾಲಾ ವಿದ್ಯಾರ್ಥಿಗಳು ಮತ್ತು ಶಾಲಾ ಪುನರಾವರ್ತಿತ ವಿದ್ಯಾರ್ಥಿಗಳು ಎಲ್ಲ ವಿಷಯಗಳ ಬಾಹ್ಯ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಎರಡೂ ಸೇರಿದಂತೆ ಒಟ್ಟಾರೆ ಶೇ.33 ಅಂದರೆ 625 ಅಂಕಗಳಿಗೆ 206 ಅಂಕಗಳನ್ನು ಗಳಿಸಬೇಕು. ಹಾಗೆಯೇ ಖಾಸಗಿ ಮತ್ತು ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಬಾಹ್ಯ ಪರೀಕ್ಷೆಯ ಎಲ್ಲ ವಿಷಯಗಳು ಸೇರಿ 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಬೇಕು ಎಂದು ಹೇಳಿದೆ.
2025-26ನೆ ಸಾಲಿನಲ್ಲಿಯೂ ಆಂತರಿಕ ಪರೀಕ್ಷೆಯನ್ನು ಒಟ್ಟು 125 ಅಂಕಗಳಿಗೆ, ಅಂದರೆ ಪ್ರಥಮ ಭಾಷೆಗೆ 25 ಅಂಕ ಮತ್ತು ಉಳಿದ 5 ವಿಷಯಗಳಲ್ಲಿ ತಲಾ 20 ಅಂಕಗಳಿಗೆ ನಡೆಸಲಾಗುತ್ತದೆ. ಬಾಹ್ಯ ಪರೀಕ್ಷೆಯನ್ನು 500 ಅಂಕಗಳಿಗೆ ಅಂದರೆ ಪ್ರಥಮ ಭಾಷೆಗೆ 100 ಅಂಕ ಮತ್ತು ಉಳಿದ 5 ವಿಷಯಗಳಿಗೆ 80 ಅಂಕಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.
ಇನ್ನು ಎನ್ಎಸ್ಕ್ಯೂಎಫ್ ವಿಷಯಗಳಲ್ಲಿ ಬಾಹ್ಯ ಪರೀಕ್ಷೆಯನ್ನು ಗರಿಷ್ಠ 60 ಅಂಕಗಳಿಗೆ ಪರೀಕ್ಷೆ ನಡೆಸಿ, 30 ಅಂಕಗಳಿಗೆ ಲೆಕ್ಕ ಹಾಕಲಾಗುತ್ತದೆ. ಆಂತರಿಕ ಮೌಲ್ಯಮಾಪನವನ್ನು 20 ಅಂಕಗಳಿಗೆ ಹಾಗೂ ಪ್ರಾಯೋಗಿಕ ಪರೀಕ್ಷೆಯನ್ನು 50 ಅಂಕಗಳಿಗೆ ನಡೆಸಲಾಗುತ್ತಿದೆ. ವಿದ್ಯಾರ್ಥಿಯು ಉತ್ತೀರ್ಣರಾಗಲು ಬಾಹ್ಯ ಪರೀಕ್ಷೆಯ 30 ಅಂಕಗಳಿಗೆ ಕನಿಷ್ಠ 10 ಅಂಕಗಳನ್ನು(ಶೇ.33) ಹಾಗೂ ಪ್ರಾಯೋಗಿಕ ಪರೀಕ್ಷೆಯಲ್ಲಿ 50 ಅಂಕಗಳಿಗೆ ಕನಿಷ್ಠ 17 ಅಂಕಗಳನ್ನು(ಶೇ.33) ಪಡೆಯುವುದು ಕಡ್ಡಾಯವಾಗಿರುತ್ತದೆ.
ಬಾಹ್ಯ ಪರೀಕ್ಷೆ, ಆಂತರಿಕ ಮೌಲ್ಯಮಾಪನ ಮತ್ತು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯ. ಒಟ್ಟಾರೆ ಬಾಹ್ಯ ಪರೀಕ್ಷೆಯ, ಆಂತರಿಕ ಮೌಲ್ಯಮಾಪನದ ಮತ್ತು ಪ್ರಾಯೋಗಿಕ ಪರೀಕ್ಷೆ ಸೇರಿ ತೇರ್ಗಡೆಯಾಗಲು ಎಲ್ಲ ವಿಷಯಗಳಲ್ಲಿ ಕನಿಷ್ಠ 30 ಹಾಗೂ ಒಟ್ಟಾರೆ ಎಲ್ಲಾ ವಿಷಯಗಳಲ್ಲಿ ತೇರ್ಗಡೆಯಾಗಲು ಶೇಕಡಾ 33ರಷ್ಟು ಅಂಕಗಳನ್ನು ಪಡೆಯಬೇಕಾಗಿರುತ್ತದೆ ಎಂದು ಹೇಳಿದೆ.







