ಕಲಬುರಗಿಯನ್ನು ಬಿಜೆಪಿ ಗೂಂಡಾಗಿರಿಯ ಕೊಂಪೆಯಾಗಲು ಅವಕಾಶ ನೀಡುವುದಿಲ್ಲ : ಪ್ರಿಯಾಂಕ್ ಖರ್ಗೆ
"ಚಿತ್ತಾಪುರದ ನಿಮ್ಮ ಘನ ಅಭ್ಯರ್ಥಿಯು ರೌಡಿಸಂ, ಗೂಂಡಾಗಿರಿಗೆ ಹೆಸರುವಾಸಿಯಾದವನು ಅಲ್ಲವೇ?"

ಪ್ರಿಯಾಂಕ್ ಖರ್ಗೆ
ಬೆಂಗಳೂರು : ‘ಕಲಬುರಗಿ ಎಂದಿಗೂ ಕಲ್ಯಾಣದ ನಾಡಾಗಿರುತ್ತದೆಯೇ ಹೊರತು, ಬಿಜೆಪಿಯ ಗೂಂಡಾಗಿರಿಯ ಕೊಂಪೆಯಾಗಲು ಸಾಧ್ಯವಿಲ್ಲ. ಕಲಬುರಗಿಯ ಜನತೆ ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ’ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ, ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕ್ ಖರ್ಗೆ, ‘ಅಕ್ಕಿ ಕಳ್ಳತನ, ಗೂಂಡಾಗಿರಿಯಲ್ಲಿ ತೊಡಗಿದವನನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರೆಸುವ ಮೂಲಕ ಕಲಬುರಗಿಯನ್ನು ಮಾಫಿಯಾ ಅಡ್ಡೆಯನ್ನಾಗಿಸುವ ಬಿಜೆಪಿ ಪ್ರಯತ್ನವು ಯಶಸ್ವಿಯಾಗದಂತೆ ನಾನು ತಡೆಯೊಡ್ಡಿರುವುದು ಬಿಜೆಪಿಗೆ ಮತ್ತು ಬಿಜೆಪಿಯ ಡ್ರಾಮಾ ಸೇನೆಗೆ ತಲೆಬಿಸಿಯಾಗಿ ಪರಿಣಮಿಸಿದೆ’ ಎಂದು ಟೀಕಿಸಿದ್ದಾರೆ.
ಬಿಜೆಪಿ, ಚಿತ್ತಾಪುರದ ನಿಮ್ಮ ಘನ ಅಭ್ಯರ್ಥಿಯು ರೌಡಿಸಂ, ಗೂಂಡಾಗಿರಿಗೆ ಹೆಸರುವಾಸಿಯಾದವನು ಅಲ್ಲವೇ?. ಅಕ್ಕಿ ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡಿರುವ ನಿಮ್ಮ ಅಭ್ಯರ್ಥಿಯ ಮೇಲೆ ನಿಮ್ಮದೇ ಆಡಳಿತದಲ್ಲಿ ಮೂವತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವಲ್ಲವೇ?. ನಿಮ್ಮ ಮಾಜಿ ಮುಖ್ಯಮಂತ್ರಿ, ನಿಮ್ಮ ಮಹಾನ್ ನಾಯಕರುಗಳು ಇದೇ ಅಕ್ಕಿ ಕಳ್ಳನ ಪರ ಚುನಾವಣಾ ಪ್ರಚಾರ ಮಾಡಿದ್ದರಲ್ಲವೇ?’ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
‘ಬಡವರ ಅಕ್ಕಿಯನ್ನಷ್ಟೇ ಅಲ್ಲ, ಅಂಗನವಾಡಿ ಮಕ್ಕಳ ಪಾಲಿನ ಪೌಷ್ಟಿಕ ಆಹಾರವನ್ನೂ ದೋಚಿರುವ ನಿಮ್ಮ ಘನ ಅಭ್ಯರ್ಥಿ ಇತ್ತೀಚಿಗೆ ಎರಡು ತಿಂಗಳು ಜೈಲಿಗೆ ಹೋಗಿ ಬಂದಿದ್ದಾನಲ್ಲವೇ?. ರೈತರಿಗೆ ವಂಚಿಸಿದ ಪ್ರಕರಣದಲ್ಲಿ ನಿಮ್ಮ ಮಾಜಿ ಶಾಸಕರ ಮೇಲೆ ಸಿಬಿಐ ಪ್ರಕರಣ ದಾಖಲಿಸಿದ್ದನ್ನು ಮರೆತಿದ್ದೀರಾ?. ಕಲಬುರಗಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆಯ ರೂವಾರಿಗಳು ಯಾರು ಎಂಬ ಪ್ರಶ್ನೆಗೆ ನಿಮ್ಮದೇ ಪಕ್ಷದ ಶಾಸಕನ ಬಳಿ ಉತ್ತರ ಕೇಳಿ ನೋಡಿ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪೊಲೀಸ್ ಪೇದೆಯ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿದ ಅಕ್ರಮ ಮರಳು ದಂಧೆಕೋರ ಬಿಜೆಪಿ ಕಾರ್ಯಕರ್ತ ಎಂಬ ಸತ್ಯವನ್ನು ಬಿಜೆಪಿ ಮರೆತಿದೆಯೇ ಅಥವಾ ಮರೆಸಲು ಪ್ರಯತ್ನಿಸುತ್ತಿದೆಯೇ?. ನಕಲಿ ಸ್ವಾಮಿಯೊಬ್ಬನನ್ನು ಮುಂದಿಟ್ಟುಕೊಂಡು ಕಲಬುರಗಿಯಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ದುರಾವಸ್ಥೆಗೆ ತಲುಪಿರುವ ಬಿಜೆಪಿ ಆರಾಜಕತೆ ಸೃಷ್ಟಿಸಿ ತಮ್ಮ ಬೇಳೆ ಬೇಯಿಸುವ ಪ್ರಯತ್ನದಲ್ಲಿದೆ’ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ರಾಜೀನಾಮೆ ಕೇಳುವುದು ಫ್ಯಾಷನ್: ‘ನನ್ನ ರಾಜೀನಾಮೆ ಕೇಳುವುದು ಬಿಜೆಪಿಯವರಿಗೆ ಫ್ಯಾಷನ್ ಆಗಿದೆ. ನಾನು ಒಂದು ರೀತಿಯಲ್ಲಿ ಬಿಜೆಪಿಯವರಿಗೆ ಮನೆ ದೇವರು ಇದ್ದಂತೆ. ಪ್ರತಿನಿತ್ಯ ಅವರಿಗೆ ನನ್ನ ಜಪ ಮಾಡದಿದ್ದರೆ ತಿಂದ ಊಟ ಜೀರ್ಣ ಆಗುವುದಿಲ್ಲ. ನಮಗೆ ಬಿಜೆಪಿಯವರ ನೀತಿ ಪಾಠದ ಅಗತ್ಯವಿಲ್ಲ’
-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ







