ಬಿಜೆಪಿ ಹಾರಾಟಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ : ಪ್ರಿಯಾಂಕ್ ಖರ್ಗೆ
"ಮಲ್ಲಿಕಾರ್ಜುನ ಖರ್ಗೆ ಎಷ್ಟು ದೃಢವಾಗಿದ್ದರೋ, ನಾನೂ ಹಾಗೆಯೇ ಇರುತ್ತೇನೆ"

ಪ್ರಿಯಾಂಕ್ ಖರ್ಗೆ
ಬೆಂಗಳೂರು : ‘ಪ್ರತಿಪಕ್ಷ ಬಿಜೆಪಿಯವರು ತಮ್ಮ ವಿರುದ್ಧ ಏನೇ ಹಾರಾಟ, ಚೀರಾಟ ಮಾಡಿ ಬಟ್ಟೆ ಹರಿದುಕೊಂಡರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾರಿಗೇ ದೂರು ನೀಡಿದರೂ ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಸವಾಲು ಹಾಕಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾವು ಸೈದ್ಧಾಂತಿಕವಾಗಿ ಬಿಜೆಪಿಯವರನ್ನು ವಿರೋಧಿಸುತ್ತೇವೆ. ಜೀವ ವಿರೋಧಿ ಮನುಸ್ಮೃತಿ, ಆರೆಸೆಸ್ಸ್ ಚಿಂತನೆಗಳಿಗೆ ವಿರುದ್ಧ ಇದ್ದೇವೆ. ಆ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು, ಇದಕ್ಕೆಲ್ಲ ನಾವು ಜಗ್ಗುವುದಿಲ್ಲ. ಅವರು ಎಷ್ಟೇ ಬೆದರಿಕೆ ಹಾಕಿದರೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೂರು ಬಾರಿ ಸಚಿವನಾಗಿದ್ದೇನೆ. ಇಷ್ಟು ವರ್ಷ ರಾಜಕೀಯ ಜೀವನದಲ್ಲಿ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಮಾಡಿಲ್ಲ. ನನ್ನ ವಿರುದ್ಧ ಆದಾಯ ತೆರಿಗೆ, ಸಿಬಿಐ, ಈಡಿ ಸೇರಿದಂತೆ ಯಾವುದೇ ಸಂಸ್ಥೆಗೆ ದೂರು ನೀಡಲಿ. ಅಮಿತ್ ಶಾ, ಪ್ರಧಾನಿ ಮೋದಿಗೂ ಹೇಳಲಿ. ನಾವು ಯಾವುದಕ್ಕೂ ಹೆದರುವುದಿಲ್ಲ. ನಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಎಷ್ಟು ದೃಢವಾಗಿದ್ದರೋ, ನಾನೂ ಹಾಗೆಯೇ ಇರುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ನನ್ನ ಆಪ್ತ ಎಂದು ಹೇಳಿಕೊಂಡಿರುವ ವ್ಯಕ್ತಿಯಿಂದ ಕಿರುಕುಳವಾಗಿದೆ ಎಂದು ವ್ಯಕ್ತಿಯೊಬ್ಬ ಆತಹತ್ಯೆ ಮಾಡಿಕೊಂಡ ಪ್ರಕರಣ ಮುಂದಿಟ್ಟುಕೊಂಡು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಆ ರೀತಿಯ ಘಟನೆ ಆಗಿರಬಹುದು. ನಾನು ಇಲ್ಲ ಎಂದು ಹೇಳುತ್ತಿಲ್ಲ. ಇದರ ತನಿಖೆಗೂ ನಾನು ವಿರೋಧ ವ್ಯಕ್ತಪಡಿಸುತ್ತಿಲ್ಲ. ತನಿಖೆಯಾಗಲಿ. ಆದರೂ ನನ್ನ ವಿರುದ್ಧ ಅನಗತ್ಯ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ಷೇಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ‘ಕಲಬುರಗಿ ರಿಪಬ್ಲಿಕ್’ ಎಂದು ದೂರಿದ್ದಾರೆ. ಕಲಬುರಗಿಯಲ್ಲಿ ಐಪಿಎಲ್ ಬೆಟ್ಟಿಂಗ್ನಲ್ಲಿ ಭಾಗಿಯಾಗಿರುವ ಶಾಸಕ ಯಾವ ಪಕ್ಷದವರು?, ಪಡಿತರ ಅಕ್ಕಿ, ಮಕ್ಕಳ ಹಾಲು ಕದ್ದು 20ಕ್ಕೂ ಹೆಚ್ಚು ಪ್ರಕರಣಗಳಿಗೆ ಗುರಿಯಾಗಿರುವವರು ಯಾರು?, ಕಲಬುರಗಿಯಲ್ಲಿ ಹೆಚ್ಚು ಅಪರಾಧಗಳನ್ನು ಮಾಡಿದವರು ಯಾರು? ಎಂಬುದಕ್ಕೆ ಮೊದಲು ಉತ್ತರ ನೀಡಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ಬಿಎಸ್ವೈ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಪ್ರಯೋಗಾಲಯದ ವರದಿ ಬಂದಿದೆ. ಅದರ ಬಗ್ಗೆ ವಿಜಯೇಂದ್ರ ಏಕೆ ಮಾತನಾಡುತ್ತಿಲ್ಲ. ಮುನಿರತ್ನ, ಸಿ.ಟಿ.ರವಿ ಪ್ರಕರಣಗಳ ಬಗ್ಗೆ ಹಾಗೂ ಕೋವಿಡ್ ಹಗರಣದ ಬಗ್ಗೆ ಏಕೆ ಸತ್ಯಶೋಧನೆ ಮಾಡುತ್ತಿಲ್ಲ. ಅನ್ವರ್ ಮಾಣಿಪಾಡಿಗೆ 150 ಕೋಟಿ ರೂ.ನೀಡಲು ಆಮಿಷವೊಡ್ಡಿದ ಪ್ರಕರಣದ ಬಗ್ಗೆ ಉಸಿರೆತ್ತುವುದಿಲ್ಲ. ನನ್ನ ರಾಜೀನಾಮೆ ಕೇಳುವ ಮೊದಲು ದಾಖಲೆ ಕೊಡಿ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ನನ್ನ ಹೆಸರೆಲ್ಲಿದೆ?: ‘ಆತಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿರುವ ಪತ್ರದಲ್ಲಿ ನನ್ನ ಹೆಸರಿದೆಯೇ?, 8 ಮಂದಿ ಆರೋಪಿಗಳಿದ್ದಾರೆ. ಅದರಲ್ಲಿ ಪ್ರಿಯಾಂಕ ಖರ್ಗೆ ಎಂದು ನಮೂದಾಗಿದೆಯೇ?, ಅವರದೇ ಕಂಪೆನಿಯ 8 ಮಂದಿ ಹೆಸರಿದೆ. ಇದರ ಬಗ್ಗೆ ಮೊದಲು ತನಿಖೆಯಾಗಲಿ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಹೆಸರನ್ನು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಈಗ ಬಿಜೆಪಿಯವರು ಆರೋಪ ಮಾಡುತ್ತಿರುವ ಪ್ರಕರಣದಲ್ಲಿ ನನ್ನ ಹೆಸರಿಲ್ಲ’
-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ







