ನನ್ನನ್ನು ನಾಯಿ ಎಂದು ಕರೆದವರಿಗೆ ಪದ್ಮಭೂಷಣ ಕೊಡಬೇಕೇ?: ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ‘ನನ್ನನ್ನು ನಾಯಿ ಎಂದು ಕರೆದಿರುವ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಚಿತ್ತಾಪುರ ಕ್ಷೇತ್ರಕ್ಕೆ ಬಂದಾಗ ಅವರಿಗೆ ಪದ್ಮಭೂಷಣ ಕೊಡಬೇಕೇ? ಅಥವಾ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕೇ?’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಛಲವಾದಿ ನಾರಾಯಣಸ್ವಾಮಿ ನನ್ನನ್ನು ನಾಯಿ(ಶ್ವಾನ) ಎಂದಿದ್ದಾರೆ. ಛಲವಾದಿ ಪ್ರಚೋದನೆಯಿಂದಲೇ ದಾಳಿ ಆಗಿದೆ. ನಾವೆಲ್ಲ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹುಟ್ಟು ಹಾಕಿದ ಹುಲಿಗಳು. ನಾನು ನನ್ನ ವ್ಯಾಪ್ತಿ ಮೀರಿ ಎಂದೂ ಯಾರ ವಿರುದ್ದವೂ ಮಾತನಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ನನ್ನನ್ನು ನೀವು(ಬಿಜೆಪಿಯವರು) ನಾಯಿಯಾದರೂ ಅಂದುಕೊಳ್ಳಿ, ನರಿಯಾದರೂ ಅಂದುಕೊಳ್ಳಿ. ಛಲವಾದಿ ನಾರಾಯಣಸ್ವಾಮಿ ತಮ್ಮ ತಲೆ ಮೇಲೆ ಆರೆಸೆಸ್ಸ್ ಚಡ್ಡಿ ಹೊತ್ತುಕೊಂಡ ನಂತರ ಮನುವಾದಿಯಾಗಿ ಬದಲಾಗಿದ್ದಾರೆ. ಅವರ ಹೇಳಿಕೆಯನ್ನು ವಿರೋಧಿಸಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ ಎಂದು ಅವರು ಸಮರ್ಥಿಸಿದರು.
ರನ್ಯಾರಾವ್ ಚಿನ್ನ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೆಲಸವೇನು?, ಅವರನ್ನು ಕಾಯುವ ಕೆಲಸ ಡಾ.ಪರಮೇಶ್ವರ ಅವರದ್ದಾ?. ರಾಜ್ಯದ ಪೊಲೀಸರಿಗೆ ಸಂಬಂಧ ಇದೆಯಾ?. ಏನೇ ಇದ್ದರೂ ಸಿದ್ದಾರ್ಥ ಟ್ರಸ್ಟ್ ನದು ವ್ಯಾಲಿಡ್ ಟ್ರಾನ್ಸಾಕ್ಷನ್. ಕ್ರೆಡಿಟ್ ಕಾರ್ಡ್ದು ಯಾವುದೇ ಟ್ರಾನ್ಸಾಕ್ಷನ್ ಇದ್ರೂ ಅದು ವೆರಿಫೈಡ್ ಟ್ರಾನ್ಸಾಕ್ಷನ್ ಆಗಿರುತ್ತದೆ. ಬಿಜೆಪಿಯವರಿಗೆ ನೈತಿಕತೆ ಇದೆಯಾ?’ ಎಂದು ಅವರು ಪ್ರಶ್ನಿಸಿದರು.
ಬಿಜೆಪಿಯವರಿಗೆ ಮಾರ್ಯಾದೆ ಇದ್ದರೆ ಮೊದಲು ತಮ್ಮ ಪಕ್ಷದ ಶಾಸಕ ಮುನಿರತ್ನರನ್ನು ಪಕ್ಷದಿಂದ ಹೊರಗೆ ಹಾಕಲಿ. ಈಡಿ ದಾಳಿ ಹೊಸದೇನೂ ಅಲ್ಲ. ದೇಶಾದ್ಯಂತ 193 ಈಡಿ ಕೇಸ್ಗಳು ಆಗಿವೆ. ಇದರಲ್ಲಿ ಕನ್ವಿಕ್ಷನ್ ರೇಟ್ ಕೇವಲ ಎರಡೇ ಕೇಸ್ಗಳು. ಅಂದರೆ, ರಾಜಕೀಯ ದುರುದ್ದೇಶ ಇದರ ಹಿಂದಿದೆ ಎಂದು ಅವರು ದೂರಿದರು.







