ನಮ್ಮ ಕುಟುಂಬವನ್ನು ಟೀಕಿಸಲು ಬಿಜೆಪಿಯವರಿಗೆ ವಿಶೇಷ ಭತ್ತೆ ಸಿಗುತ್ತಿರಬಹುದು?: ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ನಮ್ಮ ಮನೆತನ ಸುಮಾರು 50 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದೆ. ಸೈದ್ಧಾಂತಿಕವಾಗಿ ನಾವು ಆರೆಸ್ಸೆಸ್, ಬಿಜೆಪಿಯನ್ನು ಟೀಕಿಸುತ್ತೇವೆ. ಆದರೆ, ವೈಯಕ್ತಿಕವಾಗಿ ಒಬ್ಬರ ಮೇಲೆ ಹಲ್ಲೆ ನಡೆಸುವ ಮನಸ್ಥಿತಿ ನಮ್ಮದಲ್ಲ. ನಮ್ಮ ಕುಟುಂಬವನ್ನು ಟೀಕಿಸಲು ಬಿಜೆಪಿಯವರಿಗೆ ವಿಶೇಷ ಭತ್ತೆ ಸಿಗುತ್ತಿರಬಹುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿ ಬಹಿರಂಗವಾಗಿ ನಾಯಿ ಎಂದು ಬೈದಿದ್ದು ನನಗೆ. ಬೈಸಿಕೊಂಡ ಸಂತ್ರಸ್ತ ನಾನು. ಆದರೆ ಇವತ್ತು ಕಲಬುರಗಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ನಾಯಕರು ನನ್ನ ಮೇಲೆಯೇ ಆರೋಪಗಳನ್ನು ಮಾಡುತ್ತಿರುವುದು ಕುಚೋದ್ಯದ ಸಂಗತಿ ಎಂದು ಹೇಳಿದರು.
ನಾರಾಯಣಸ್ವಾಮಿ ಅವರಿಗೆ ಎರಡು ನಾಲಿಗೆಯಿದೆ. ಒಂದು ನಾಲಿಗೆ ಕಲ್ಯಾಣ ಕರ್ನಾಟಕದಲ್ಲಿ, ಮತ್ತೊಂದು ಬೆಂಗಳೂರಿನಲ್ಲಿ. ರಾಜ್ಯಪಾಲರನ್ನು ಭೇಟಿಯಾಗಿ ಬಂದು ನಾನು ಪ್ರಿಯಾಂಕ್ ಖರ್ಗೆಗೆ ನಾಯಿ ಎಂದಿಲ್ಲ. ಇದನ್ನು ಅವರೇ ಭಾವಿಸಿಕೊಂಡಿದ್ದಾರೆ ಎಂದರು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
‘ನಾಯಿಯೇ ನಾರಾಯಣ, ನನ್ನ ಹೆಸರು ನಾರಾಯಣ’ ಎಂದು ಹೇಳಿರುವ ನಾರಾಯಣಸ್ವಾಮಿಯನ್ನು ನಾಳೆಯಿಂದ ಏನೆಂದು ಕರೆಯಬೇಕು ಎಂದು ಅವರೇ ಸ್ಪಷ್ಟಪಡಿಸಬೇಕು. ಕಲಬುರಗಿ ಜನ ನಮ್ಮ ಕೆಲಸವನ್ನು ನೋಡಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಮುಂದೆಯೂ ಮಾಡುತ್ತಾರೆ. ಏಕೆಂದರೆ ನಿಮ್ಮಂತೆ ನಮ್ಮಲ್ಲಿ 40 ಪರ್ಸೆಂಟ್, 20 ಪರ್ಸೆಂಟ್ ಇಲ್ಲ. ಕಲ್ಯಾಣ ಕರ್ನಾಟಕವನ್ನ ಅಭಿವೃದ್ಧಿಯೇ ನಮ್ಮ ಉದ್ದೇಶ ಎಂದು ಅವರು ಹೇಳಿದರು.
ಚಿತ್ತಾಪುರದಲ್ಲಿ ಬಿಜೆಪಿಯವರು ಅಕ್ಕಿಕಳ್ಳನಿಗೆ ಟಿಕೆಟ್ ನೀಡಿದ್ದರು. ಮುಂದೆ ಯಾವ ಕಳ್ಳನಿಗೆ ನೀಡುತ್ತಾರೋ ಗೊತ್ತಿಲ್ಲ. ನೀವು ಎಷ್ಟೇ ತಿಪ್ಪರಲಾಗ ಹಾಕಿದರೂ ಸಹ ಚಿತ್ತಾಪುರ ಜನತೆ ಅಭಿವೃದ್ಧಿಗೆ ಮತ ಹಾಕುತ್ತಾರೆ. ಕಲಬುರಗಿಯ ಜನತೆಗೆ ಅಭಿವೃದ್ಧಿಯ ನಿರೀಕ್ಷೆ ಇದ್ದರೆ ಅದು ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ. ನಿಮ್ಮಿಂದಲ್ಲ ಎಂದು ಅವರು ಬಿಜೆಪಿ ವಿರುದ್ಧ ಕಿಡಿಗಾರಿದರು.
ನಾರಾಯಣಸ್ವಾಮಿ ನಾನು ನಿಮ್ಮಿಂದ ಎಂದಿಗೂ ಕ್ಷಮೆ ಬಯಸುವುದಿಲ್ಲ. ಆದರೆ, ಸದನದಲ್ಲಿ ಸಾವರ್ಕರ್ ಹಾಗೂ ಅಂಬೇಡ್ಕರ್ ಅವರ ಕುರಿತು ನೀವು ಹಾಕಿದ್ದ ಸವಾಲುಗಳಿಗೆ ದಾಖಲೆಗಳನ್ನೆ ನಿಮ್ಮ ಮುಂದೆ ಇರಿಸಿದ್ದೇನೆ. ನಿಮ್ಮ ಬದ್ಧತೆ ಪ್ರದರ್ಶಿಸಲು ವಿಪಕ್ಷ ನಾಯಕನ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಿ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಮೋದಿಯನ್ನು ದೇಶದ ವಿಚಾರ, ಆರ್ಥಿಕ ಪರಿಸ್ಥಿತಿ, ನಾಗರೀಕರ ವಿಚಾರ ಸೇರಿದಂತೆ ಯಾವುದೇ ವಿಚಾರ ಇದ್ದರೂ ಪ್ರಶ್ನೆ ಮಾಡಬಾರದು ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. ರಿಪಬ್ಲಿಕ್ ಆಫ್ ಕಲಬುರಗಿ ಆಗಿದೆ ಎಂದು ಪ್ರತಿಭಟನೆ ಮಾಡಲು ಅಲ್ಲಿಗೆ ಹೋಗಿದ್ದಾರೆ. ರಿಪಬ್ಲಿಕ್ ಆಫ್ ಕಲಬುರಗಿ ಆಗಿದ್ದರೆ ಇವರಿಗೆ ಪ್ರತಿಭಟನೆ ಮಾಡಲು ಅನುಮತಿ ಸಿಗುತ್ತಿತ್ತೇ? ಎಂದು ಅವರು ಪ್ರಶ್ನಿಸಿದರು.
ವಿಪಕ್ಷದ ನಾಯಕರಾದ ಅಶೋಕ್, ವಿಜಯೇಂದ್ರ, ಸಿ.ಟಿ.ರವಿ, ರವಿಕುಮಾರ್ ಕಲಬುರಗಿಗೆ ಬಂದಿದ್ದಾರೆ. ಅಧಿಕಾರದಲ್ಲಿದ್ದಾಗ ಒಮ್ಮೆಯೂ ಬಂದಿರಲಿಲ್ಲ. ಈಗ ಇವರದ್ದೆಲ್ಲಾ ಇಲ್ಲಿಗೆ ನಾಲ್ಕನೇ ಭೇಟಿ. ಕಲಬುರಗಿಗೆ ಬಂದು ರೈತರ ಪರವಾಗಿ, ಸರಕಾರದ ವೈಫಲ್ಯಗಳು ಇದ್ದರೆ, ನಮ್ಮ ತಪ್ಪುಗಳು ಕಂಡರೆ ಅವುಗಳ ವಿರುದ್ಧ ಮಾತನಾಡುತ್ತಿಲ್ಲ. ಇವರ ಭೇಟಿಯ ಉದ್ದೇಶ ‘ಪ್ರಿಯಾಂಕ್ ಖರ್ಗೆ ಹಠಾವೋ ಕಲಬುರಗಿ ಬಚಾವೋ’ ಎಂಬುದಾಗಿದೆ ಎಂದು ಅವರು ಟೀಕಿಸಿದರು.
ರಾಜ್ಯ ಬಿಜೆಪಿ ನಾಯಕರೇ ನೀವು ಕಲಬುರಗಿಯ ಬಿಜೆಪಿ ನಾಯಕರನ್ನು ನಂಬಿಕೊಂಡು ರಾಜಕೀಯ ಮಾಡಲು ಹೊರಟರೇ ನಿಮಗೆ ಸಿಗುವುದು ಅವಮಾನ ಮತ್ತು ಮುಖಭಂಗ ಮಾತ್ರ. ಕಲಬುರಗಿಯ ಒಬ್ಬೊಬ್ಬ ಬಿಜೆಪಿ ನಾಯಕನೂ ಅಪರಂಜಿ ಇದ್ದಂತೆ. ಈ ಬಿಜೆಪಿಯವರು ಟಿಕೆಟ್ ನೀಡುವಾಗ ಎಫ್ಐಆರ್ ಓದಿಕೊಂಡು ಟಿಕೆಟ್ ನೀಡುತ್ತಾರೆ ಎನಿಸುತ್ತದೆ. ಕಲಬುರಗಿ ಭಾಗದಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದವರು ಯಾರು ಎಂದು ಬಿಜೆಪಿ ನಾಯಕರನ್ನೆ ಕೇಳಬೇಕು ಎಂದು ಅವರು ತಿಳಿಸಿದರು.
ಸಿ.ಟಿ.ರವಿಗೆ ನಿಜಾಮರು, ರಝಾಕಾರರು ಬಿಟ್ಟರೇ ಬೇರೆ ಏನೂ ತಿಳಿದಿಲ್ಲ. ಇವರ ಬಾಯಲ್ಲಿ ಅದೆಷ್ಟು ಬಾರಿ ಪಾಕಿಸ್ತಾನ, ಮುಸಲ್ಮಾನರ ಹೆಸರು ಬರುತ್ತದೆಯೋ. ಮೇಲ್ಮನೆಯಲ್ಲಿ ನಡೆದ ಘಟನೆಯ ವಿಚಾರವಾಗಿ ಇನ್ನೂ ಧ್ವನಿ ಪರೀಕ್ಷೆಗೆ ಒಳಪಡದ ಅವರು ಸುಪ್ರೀಂಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇವರು ರಿಪಬ್ಲಿಕ್ ಆಫ್ ಕಲಬುರಗಿ ಎಂದು ಭಾಷಣ ಹೊಡೆಯುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.
ರಿಪಬ್ಲಿಕ್ ಆಫ್ ಬಳ್ಳಾರಿ ಕಟ್ಟಿದ ಶ್ರೀರಾಮುಲು ಬಂದು ರಿಪಬ್ಲಿಕ್ ಆಫ್ ಕಲಬುರಗಿ ಎಂದು ಮಾತನಾಡುತ್ತಿದ್ದಾರೆ. ನನ್ನನ್ನು ಕರ್ನಾಟಕದ ಪಪ್ಪು ಎಂದು ಕರೆಯುತ್ತಿದ್ದಾರೆ. ನಾನೇ ಪಪ್ಪು ಆದರೆ ಅವರು ಇನ್ನೇನು. ಹತ್ತು ಸಾಲು ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲ ಆ ಮನುಷ್ಯನಿಗೆ. ರಾಜ್ಯದ ಅಥವಾ ದೇಶದ ಯಾವುದೇ ವಿಷಯದ ಬಗ್ಗೆ ಬಹಿರಂಗವಾಗಿ ನನ್ನ ಜೊತೆ ಚರ್ಚೆ ಬರಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ಡಿಸಿಎಂ ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಕೋರಿಲ್ಲ ಎಂದು ವಿಪಕ್ಷ ನಾಯಕ ಅಶೋಕ್ ಟ್ವೀಟ್ ಮಾಡುತ್ತಾರೆ. ಇವರಿಗೆ ಇದೆಲ್ಲ ಚರ್ಚೆಯ ವಿಷಯ. ಕರ್ನಾಟಕದಲ್ಲಿ ವಿರೋಧ ಪಕ್ಷ ಎಷ್ಟು ಮಟ್ಟಿಗೆ ಕುಸಿದಿದೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಮತ್ತು ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮ್ಮಯ್ಯ ಉಪಸ್ಥಿತರಿದ್ದರು.







