371 ‘ಜೆ’ ಅಡಿ ಹುದ್ದೆಗಳ ಆಯ್ಕೆ ನಿಯಮಾನುಸಾರ ನಡೆಸಿ : ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಸೂಚನೆ

ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ 371 ಜೆ ಅಡಿ ಸರಕಾರದ ವಿವಿಧ ಸಂಸ್ಥೆಗಳಲ್ಲಿ ಹುದ್ದೆಗಳ ನೇಮಕಾತಿಗಳು ಸರಕಾರ ನಿಗದಿ ಪಡಿಸಿರುವ ಮಾನದಂಡಗಳಂತೆ ನಡೆಯುತ್ತಿಲ್ಲ, 2023ರ ಸರಕಾರದ ಆದೇಶದಂತೆ ಕಟ್ಟುನಿಟ್ಟಾಗಿ ಎಲ್ಲ ಆಯ್ಕೆಗಳನ್ನು ಮಾಡಬೇಕು ಎಂದು 371-ಜೆ ಅನುಷ್ಠಾನ ಕುರಿತ ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರೂ ಪಾಲ್ಗೊಂಡು, ಸರಕಾರದ ವಿವಿಧ ಸಂಸ್ಥೆಗಳು ಸರಕಾರದ ಸೂಚನೆಯನ್ನು ಪಾಲಿಸುವಲ್ಲಿ ಲೋಪ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ನಿಯಮಬಾಹಿರವಾಗಿ ಮಾಡಿರುವ ಆಯ್ಕೆಗಳನ್ನು ಹಿಂಪಡೆಯಬೇಕೆಂದು ಸೂಚಿಸಿದರು.
ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದಾಗ್ಯೂ ವಿವಿಧ ಇಲಾಖೆಗಳಲ್ಲಿ ಗೊಂದಲ ಇರುವುದರಿಂದ ಮತ್ತೊಮ್ಮೆ ಸೂಕ್ತ ಮಾರ್ಗದರ್ಶನಗಳನ್ನು ನೀಡುವಂತೆ ಪ್ರಿಯಾಂಕ್ ಖರ್ಗೆ ಸಭೆಯಲ್ಲಿದ್ದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಜಿ.ಸತ್ಯವತಿ ಅವರಿಗೆ ಸೂಚಿಸಿದರು.
ಮುಂದಿನ ತಿಂಗಳು 371-ಜೆ ಅನುಷ್ಠಾನ ಕುರಿತ ಸಚಿವ ಸಂಪುಟದ ಉಪ ಸಮಿತಿಯ ಸಭೆ ಕರೆದು ಈ ಸಂಬಂಧದ ಗೊಂದಲಗಳನ್ನು ನಿವಾರಿಸಲಾಗುವುದೆಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸಭೆಯಲ್ಲಿ ಕಿಯೊನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಪವನ್ ಕುಮಾರ್ ಮಾಲಪಾಟಿ, ಎಂ.ಎಸ್.ಐ.ಎಲ್‍ನ ಮನೋಜ್ ಕುಮಾರ್, ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಭಾರತಿ, ಕರ್ನಾಟಕ ನಗರ ಜಲಮಂಡಳಿಯ ಡಾ.ಸೆಲ್ವಮಣಿ, ಆಹಾರ ಹಾಗೂ ನಾಗರಿಕ ಪೂರೈಕೆ ನಿಗಮದ ಎಂ.ವಿ.ಚಂದ್ರಕಾಂತ್ ಮುಂತಾದವರು ಭಾಗವಹಿಸಿದ್ದರು.







