ಬಿಜೆಪಿಯವರು ಕ್ಷಮೆ ಕೇಳುವುದರಲ್ಲಿ ಸಾವರ್ಕರ್ ಬದ್ಧತೆಯನ್ನಾದರೂ ತೋರಿಸಬೇಕು : ಪ್ರಿಯಾಂಕ್ ಖರ್ಗೆ
"ಬಿಜೆಪಿಗರ ಕ್ಷಮೆಯಲ್ಲಿ ಪಶ್ಚಾತಾಪವಿರುವ ಬದಲು ಅಹಂಕಾರ, ಅವಕಾಶವಾದಿತನ, ಕಾನೂನಿನ ಭಯವಿರುತ್ತದೆ"

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬಿಜೆಪಿಯವರು ಕ್ಷಮೆ ಕೇಳುವುದರಲ್ಲಿ ಸಾವರ್ಕರ್ ಅವರ ಬದ್ಧತೆಯನ್ನಾದರೂ ತೋರಿಸಬೇಕು. ಸಾವರ್ಕರ್ ಮನಃಪೂರ್ವಕವಾಗಿ ಬ್ರಿಟಿಷರ ಕ್ಷಮೆ ಕೇಳಿ, ನಂತರ ಬ್ರಿಟಿಷರ ಜೊತೆ ನಿಂತು ಕೆಲಸ ಮಾಡಿದ್ದ ಅವರ ಪ್ರಾಮಾಣಿಕತೆಯನ್ನು ಅನುಸರಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಕ್ಷಮೆ ಕೇಳುವುದರಲ್ಲಿ ಎರಡು ವಿಧ. ನೈಜ ಕ್ಷಮೆ ಮತ್ತು ಬಿಜೆಪಿಗರ ನಕಲಿ ಕ್ಷಮೆ!. ನೈಜ ಕ್ಷಮೆಯ ಹಿಂದೆ ಪಶ್ಚಾತಾಪವಿರುತ್ತದೆ, ವಿಚಾರ ಪಕ್ವತೆ ಇರುತ್ತದೆ, ಜಾಗೃತಿ ಇರುತ್ತದೆ, ತಪ್ಪೆಸಗಿದ್ದಕ್ಕೆ ಗಿಲ್ಟ್ ಇರುತ್ತದೆ. ಬಿಜೆಪಿಯವರ ನಕಲಿ ಕ್ಷಮೆಗೆ ಕಾರಣಗಳೇ ಬೇರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಗರ ಕ್ಷಮೆಯಲ್ಲಿ ಪಶ್ಚಾತಾಪವಿರುವ ಬದಲು ಅಹಂಕಾರವಿರುತ್ತದೆ, ಅವರ ಕ್ಷಮೆಯ ಹಿಂದೆ ಅವಕಾಶವಾದಿತನ ಇರುತ್ತದೆ ಅಥವಾ ಕಾನೂನಿನ ಭಯವಿರುತ್ತದೆ, ಇಲ್ಲವೇ ಜನಾಕ್ರೋಶದ ಒತ್ತಡ ಇರುತ್ತದೆ ಅಷ್ಟೇ. ಬಿಜೆಪಿಗರದ್ದು ಸ್ವಯಂಪ್ರೇರಣೆಯ, ಜ್ಞಾನೋದಯದ ಕ್ಷಮೆ ಅಲ್ಲವೇ ಅಲ್ಲ ಎಂದಿದ್ದಾರೆ.
ಬಿಜೆಪಿಗರ ಮನಃಪೂರ್ವಕವಲ್ಲದ ದುರಹಂಕಾರದ ಕ್ಷಮೆಗೆ ಉದಾಹರಣೆ ಹಲವು ಇವೆ. ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಕ್ಷಮೆ ಕೇಳಿದ ಪರಿಷತ್ ಸದಸ್ಯ ರವಿಕುಮಾರ್ ಅವರು ಘನಂದಾರಿ ಕೆಲಸ ಮಾಡಿದವರಂತೆ ಮೆರವಣಿಗೆಯಲ್ಲಿ ಪೊಲೀಸ್ ಠಾಣೆಗೆ ಹೋಗುತ್ತಾರೆ ಎಂದರೆ ಅವರ ಕ್ಷಮೆ ಕೇವಲ ಬೂಟಾಟಿಕೆಯದ್ದು ಹೊರತು ಮನಃಪೂರ್ವಕವಾದುದಲ್ಲ. ನಟ ಪ್ರಕಾಶ್ ರಾಜ್ ಅವರನ್ನು ಅವಹೇಳನ ಮಾಡಿದ್ದ ಪ್ರತಾಪ್ ಸಿಂಹ ಕಾನೂನಿನ ಒತ್ತಡಕ್ಕೆ ಕ್ಷಮೆ ಕೇಳಿದ್ದಾರೆ. ಸೋಫಿಯಾ ಖುರೇಶಿಯವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವಿಜಯ್ ಷಾ ಜನಾಕ್ರೋಶಕ್ಕೆ ಕ್ಷಮೆ ಕೇಳಿದ್ದಾರೆ. ನನಗೆ ನಾಯಿ ಎಂದಿದ್ದ ನಾರಾಯಣಸ್ವಾಮಿಯವರು ಜನಾಕ್ರೋಶದ ಒತ್ತಡಕ್ಕೆ ಕ್ಷಮೆ ಕೇಳಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.







