ʼಅಮೆರಿಕ ಭೇಟಿಗೆ ಅವಕಾಶ ನಿರಾಕರಣೆ’ ಕೇಂದ್ರ ಸರಕಾರ ವಿವರಣೆ ನೀಡಬೇಕು : ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಅಮೆರಿಕಾದ ಬಾಸ್ಟನ್ ನಲ್ಲಿ ನಡೆದ ಬಯೋ ಇಂಟರ್ ನ್ಯಾಷನಲ್ ಕನ್ವೆಂಷನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ತನಗೆ ಕೇಂದ್ರ ಸರಕಾರ ನಿರಾಕರಿಸಿರುವುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಬೇಕು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮೆರಿಕದಲ್ಲಿ ನಡೆಯಲಿರುವ ಕಾರ್ಯಕ್ರಮ ಹಾಗೂ ನನ್ನ ನೇತೃತ್ವದಲ್ಲಿ ತೆರಳಲಿರುವ ನಿಯೋಗದಲ್ಲಿನ ಅಧಿಕಾರಿಗಳ ಸಂಪೂರ್ಣ ವಿವರಗಳನ್ನು ಮೇ 15ರಂದು ಕೇಂದ್ರ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಲಾಗಿತ್ತು ಎಂದು ಹೇಳಿದರು.
ಜೂ.4ರಂದು ನಾವು ಕಳುಹಿಸಿಕೊಟ್ಟಿದ್ದ ಪ್ರಸ್ತಾವನೆಯನ್ನು ಕೇಂದ್ರ ವಿದೇಶಾಂಗ ಇಲಾಖೆ ತಿರಸ್ಕರಿಸಿತು. ಆದರೆ, ಯಾವ ಕಾರಣಕ್ಕಾಗಿ ನಮ್ಮ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂಬ ವಿವರಣೆಯನ್ನು ನೀಡಿಲ್ಲ. ಜೂ.6ರಂದು ನಾನು ನಿಯೋಗದ ಪಟ್ಟಿಯಲ್ಲಿ ನನ್ನ ಹೆಸರನ್ನು ಮಾತ್ರ ತೆಗೆದು, ಅಧಿಕಾರಿಗಳ ನಿಯೋಗ ತೆರಳಲು ಅನುಮತಿ ನೀಡುವಂತೆ ಕೋರಿದ್ದಕ್ಕೆ ಜೂ.11ರಂದು ಅನುಮೋದನೆ ಸಿಕ್ಕಿತು ಎಂದು ಅವರು ಹೇಳಿದರು.
ಕೇವಲ ಅಧಿಕಾರಿಗಳ ನಿಯೋಗ ಹೋದರೆ ಸಾಕಾಗುವುದಿಲ್ಲ. ನಿರ್ಧಾರ ತೆಗೆದುಕೊಳ್ಳುವವರು ಇರಬೇಕು ಎಂದು ಭಾವಿಸಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೆಸರನ್ನು ನಿಯೋಗದಲ್ಲಿ ಸೇರಿಸಿ ಜೂ.12ರಂದು ಕೇಂದ್ರ ವಿದೇಶಾಂಗ ಇಲಾಖೆಗೆ ಕಳುಹಿಸಿಕೊಟ್ಟೆ, ಜೂ.14ರಂದು ಅನುಮೋದನೆ ಸಿಕ್ಕಿತು. ಇದರಲ್ಲಿನ ಕ್ರೋನಾಲಜಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬಿಜೆಪಿಯವರಿಗೆ ನನ್ನ ಹೆಸರು ಹಾಗೂ ನನ್ನ ಕುಟುಂಬದ ಹೆಸರಿನ ಮೇಲೆ ಯಾಕಿಷ್ಟು ಅಸಹನೆ ಎಂದು ಗೊತ್ತಾಗುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ನನ್ನ ವಿರುದ್ಧ ಅವರು ಟೀಕಾ ಪ್ರಹಾರಗಳನ್ನು ಮಾಡುತ್ತಲೆ ಬಂದಿದ್ದಾರೆ. ಬಿಜೆಪಿಯವರಿಗೆ ಪ್ರಿಯಾಂಕ್ ಅಂದರೆ ನೋವು. ಪ್ರಿಯಾಂಕ್ ಖರ್ಗೆ ಅಂದರೆ ಇನ್ನೂ ನೋವು ಎಂದು ಅವರು ಕಿಡಿಕಾರಿದರು.
ನಾನು ಈ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು, ಸ್ಪಷ್ಟೀಕರಣ ಕೋರಲಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಮೂಲಕ ಪ್ರಧಾನಿಗೆ ಪತ್ರ ಬರೆದು ಸ್ಪಷ್ಟೀಕರಣ ಕೇಳಲು ಕೋರುತ್ತೇನೆ. ರಾಜ್ಯಕ್ಕೆ ಬಂಡವಾಳ ಬರಬೇಕೆಂಬ ಉದ್ದೇಶದಿಂದ ನಾವು ಹೋಗುತ್ತಿದ್ದೇವೆ. ಆದರೆ ಇದರಲ್ಲಿ ರಾಜಕೀಯ ಮಾಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕಳೆದ ಬಾರಿ ನಾನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ವಿದೇಶ ಪ್ರವಾಸ ಕೈಗೊಂಡಿದ್ದ ವೇಳೆ 10 ದಿನಗಳಲ್ಲಿ 72 ಸಭೆಗಳನ್ನು ಮಾಡಿದ್ದೇವು. ನಾವು ಕಾಲಹರಣ ಮಾಡಿಲ್ಲ, ಫೋಟೋ ಸೆಷನ್ ಮಾಡಿಸಿಕೊಂಡಿಲ್ಲ. ಸುಮಾರು 30 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆಯ ಭರವಸೆ ಸಿಕ್ಕಿತ್ತು. ಒಂದು ವರ್ಷದ ಅವಧಿಯಲ್ಲಿ 21,847 ಕೋಟಿ ರೂ.ಗಳು ಬಂದಿದ್ದು, 18-20 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ತಿಳಿಸಿದರು.
2022ರ ಮೇ ತಿಂಗಳಿಂದ 2024ರ ಡಿಸೆಂಬರ್ ವರೆಗೆ ಮೋದಿ ವಿದೇಶ ಪ್ರವಾಸಕ್ಕೆ 258 ಕೋಟಿ ರೂ. ಖರ್ಚು ಮಾಡಿದ್ದಾರೆ. ಸುಮಾರು 38 ವಿದೇಶ ಪ್ರವಾಸ ಮಾಡಿದ್ದಾರೆ. ಮೋದಿ ಪ್ರವಾಸದಿಂದ ಆಗಿರುವ ಲಾಭ ಏನು? ಎಂಬುದಕ್ಕೆ ಉತ್ತರ ಕೊಡಲಿ ಎಂದು ಅವರು ಸವಾಲು ಹಾಕಿದರು.
ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ ಸೇರಿದಂತೆ ಹಲವಾರು ಘೋಷಣೆಗಳನ್ನು ಮಾಡುತ್ತಾರೆ. ಆದರೆ, ಅವರ ಘೋಷಣೆಗಳನ್ನು ಸಾಕಾರಗೊಳಿಸುತ್ತಿರುವುದು ನಮ್ಮ ರಾಜ್ಯ. ಅವರು ಕೇವಲ ಘೋಷಣೆಗಳನ್ನು ಕೂಗುತ್ತಾರೆ, ನಾವು ದೇಶ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ವಿಕಸಿತ ಭಾರತ, 10 ಟ್ರಿಲಿಯನ್ ಆರ್ಥಿಕತೆ ಬಯಸುವವರು, ನಮ್ಮ ರಾಜ್ಯಕ್ಕೆ ಬರುವ ಬಂಡವಾಳವನ್ನು ತಡೆಯಲು ಯಾಕೆ ಮುಂದಾಗುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರದ ನಿಯೋಗಗಳು ವಿದೇಶಗಳಿಗೆ ಹೋಗಬೇಕಾದರೆ ಕೇಂದ್ರ ಸರಕಾರದ ಸಹಾಯ ಬೇಕಾಗುತ್ತದೆ. ನಮಗೆ ರಾಜತಾಂತ್ರಿಕ ಮಾನ್ಯತೆ ಸಿಗುತ್ತದೆ. ಆ ಮೂಲಕ ನಾವು ಸರಕಾರ, ಪ್ರಮುಖ ಕಂಪನಿಗಳ ಜೊತೆ ಚರ್ಚೆಗಳನ್ನು ನಡೆಸಲು ಸಾಧ್ಯವಾಗುತ್ತದೆ. ಖಾಸಗಿ ಭೇಟಿ ವೇಳೆ ಈ ರೀತಿ ಸಭೆ, ಚರ್ಚೆಗಳನ್ನು ನಡೆಸಲು ಅವಕಾಶವಿರುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕರ್ನಾಟಕವು ದೇಶದ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ವಲಯದ ರಾಜಧಾನಿಯಾಗಿದೆ. ಬಯೋ ಇಂಟರ್ ನ್ಯಾಷನಲ್ ಕನ್ವೆಂಷನ್ ನಲ್ಲಿ ನಮ್ಮ ರಾಜ್ಯ ಭಾಗವಹಿಸದೆ ಇನ್ಯಾರು ಭಾಗವಹಿಸಬೇಕು. ಮಧ್ಯಪ್ರದೇಶ, ಉತ್ತರಪ್ರದೇಶದವರು ಭಾಗವಹಿಸಬೇಕಿತ್ತೇ? ಎಂದು ಅವರು ಪ್ರಶ್ನಿಸಿದರು.
ʼರಫೇಲ್ ಖರೀದಿ ಪ್ರಕ್ರಿಯೆʼ ಪಾರದರ್ಶಕವಾಗಿರಬೇಕು ಎಂದು ಬಯಸುವುದು ತಪ್ಪೇ? : ರಫೆಲ್ ಯುದ್ಧ ವಿಮಾನ ವಿಚಾರದಲ್ಲಿ ಟ್ವೀಟ್ ಮಾಡಿದ್ದರಿಂದ ನಿಮಗೆ ಅಮೆರಿಕ ಭೇಟಿಗೆ ನಿರಾಕರಿಸಲಾಗಿದೆ ಎಂದು ಅನಿಸುತ್ತಿದೆಯಾ? ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ರಫೇಲ್ ಯುದ್ಧ ವಿಮಾನದ ಸಾಮರ್ಥ್ಯದ ಬಗ್ಗೆ ನಾನು ಪ್ರಶ್ನೆ ಮಾಡಿಲ್ಲ. ಅದರ ವೆಚ್ಚದ ಬಗ್ಗೆ ಪ್ರಶ್ನೆ ಮಾಡಿದ್ದೇವೆ?. ಸರಕಾರ ಖರೀದಿ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ಬಯಸುವುದು ತಪ್ಪೇ? ಆಪರೇಷನ್ ಸಿಂಧೂರ್ನಲ್ಲಿ ನಮ್ಮ ಒಂದೆರಡು ರಫೆಲ್ ಯುದ್ಧ ವಿಮಾನಗಳು ಪತನವಾಗಿರುವ ಕುರಿತು ನನಗೆ ಫ್ರಾನ್ಸ್ ನಲ್ಲಿ ಮಾಹಿತಿ ಸಿಕ್ಕಿತು ಎಂದು ಹೇಳಿದರು.







