‘ಇ-ಸ್ವತ್ತು’ ಜುಲೈ ಎರಡನೆ ವಾರದಲ್ಲಿ ಅಂತಿಮ ನಿಯಮಾವಳಿಗಳು ಪ್ರಕಟ: ಪ್ರಿಯಾಂಕ್ ಖರ್ಗೆ

ಬೆಂಗಳೂರು : ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ಇ-ಸ್ವತ್ತು ವಿತರಿಸುವಲ್ಲಿ ರೂಪಿಸಲಾಗುತ್ತಿರುವ ಕರಡು ನಿಯಮಾವಳಿಗಳು ಈ ಮಾಸಾಂತ್ಯಕ್ಕೆ ಸಿದ್ಧಗೊಳ್ಳುತ್ತಿದ್ದು, ಜುಲೈ ಎರಡನೆಯ ವಾರದಲ್ಲಿ ಅಂತಿಮ ನಿಯಮಾವಳಿಗಳು ಪ್ರಕಟಗೊಳ್ಳಲಿವೆ, ಆನಂತರ ಇ–ಸ್ವತ್ತು ವಿತರಣೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನರು ಇ-ಸ್ವತ್ತು ವಿತರಣೆ ಪ್ರಕ್ರಿಯೆಯ ನಿರೀಕ್ಷೆಯಲ್ಲಿದ್ದು, ಸರಳ ಹಾಗೂ ಸುಗಮ ರೀತಿಯಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಸೂಚನೆ ನೀಡಿದರು.
ಇ-ಸ್ವತ್ತು ಆಸ್ತಿ ನಮೂನೆಗಳನ್ನು ವಿತರಿಸುವುದರಿಂದ ರಾಜ್ಯದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 1.45 ಕೋಟಿ ಆಸ್ತಿಗಳು ಇ-ಸ್ವತ್ತು ತೆಕ್ಕೆಗೆ ಬರುವ ನಿರೀಕ್ಷೆಯಿದ್ದು, ಸಾರ್ವಜನಿಕರ ಆಸ್ತಿಗಳು ಅಧಿಕೃತಗೊಳ್ಳುವುದಲ್ಲದೆ, ಗ್ರಾಮ ಪಂಚಾಯತಿಗಳ ಆದಾಯ ಹೆಚ್ಚಲಿರುವುದರಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ (ಪಂಚಾಯತ್ ರಾಜ್) ಉಮಾ ಮಹದೇವನ್, ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.







