ಸಚಿವ ಪ್ರಿಯಾಂಕ್ ಖರ್ಗೆ ಅಮೆರಿಕಾ ಭೇಟಿಗೆ ಕೊನೆಗೂ ಅನುಮತಿ: ‘ವಿದೇಶಾಂಗ ಇಲಾಖೆ ಯು-ಟರ್ನ್ಗೆ ಕಾರಣವೇನು?’

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಮೆರಿಕ ಪ್ರವಾಸಕ್ಕೆ ವಿದೇಶಾಂಗ ಇಲಾಖೆ ಕೊನೆಗೂ ಹಸಿರು ನಿಶಾನೆ ತೋರಿಸಿದೆ.
ಪ್ರಿಯಾಂಕ್ ಖರ್ಗೆ ಅವರು ತಮ್ಮ ಅಧಿಕೃತ ಅಮೆರಿಕ ಭೇಟಿಗೆ ಅನುಮತಿ ನಿರಾಕರಿಸಿದ್ದಕ್ಕೆ ಸ್ಪಷ್ಟನೆ ಕೋರಿ ವಿದೇಶಾಂಗ ಇಲಾಖೆ ಸಚಿವ ಎಸ್.ಜೈ ಶಂಕರ್ ಅವರಿಗೆ ಪತ್ರ ಬರೆದ ಎರಡು ದಿನಗಳ ನಂತರ ಪ್ರಿಯಾಂಕ್ ಖರ್ಗೆಯವರಿಗೆ ಅಮೆರಿಕ ದೇಶಕ್ಕೆ ಪ್ರಯಾಣಿಸಲು ಕೇಂದ್ರ ಸರಕಾರದಿಂದ ಅನುಮತಿ ದೊರಕಿದೆ.
ಶನಿವಾರ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕ್ ಖರ್ಗೆ, ‘ವಿದೇಶಾಂಗ ಸಚಿವಾಲಯ ಯು-ಟರ್ನ್ ಹೊಡೆದಿದ್ದು, ಇದೀಗ ನನ್ನ ಅಮೆರಿಕ ಅಧಿಕೃತ ಭೇಟಿಗೆ ಅನುಮತಿ ನೀಡಿದೆ. ನಾನು ಮೇ 15ಕ್ಕೆ ‘ಜೂ.14ರಿಂದ 27ರ ನಡುವೆ ಹಲವು ಸಭೆ, ಸಮ್ಮೇಳನಗಳಲ್ಲಿ ಭಾಗಿಯಾಗಲು ಅಮೆರಿಕ ದೇಶದ ಭೇಟಿಗಾಗಿ ಅನುಮತಿ ಕೋರಿದ್ದೆ. ಇದೀಗ ವಿದೇಶಾಂಗ ಸಚಿವಾಲಯ ತನ್ನ ಹಿಂದಿನ ನಿರ್ಧಾರದಿಂದ ಹಿಂದೆ ಸರಿದಿದ್ದು, ಅಮೆರಿಕ ಭೇಟಿಗೆ ನನಗೆ ಅನುಮತಿ ನೀಡಿದೆ’ ಎಂದು ತಿಳಿಸಿದ್ದಾರೆ.
ತಡವಾಗಿ ಅನುಮತಿ: ‘ಅಮೆರಿಕ ಪ್ರವಾಸಕ್ಕೆ ಕೆಲವೇ ದಿನಗಳಿರುವಾಗ ಕೊನೆ ಕ್ಷಣದಲ್ಲಿ ವಿಳಂಬ ಮಾಡಿ ಅನುಮತಿ ನೀಡಿರುವುದರ ಉದ್ದೇಶ ಏನು?’ ಎಂದು ಖಾರವಾಗಿ ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ನ ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ ಜೂ.12ಕ್ಕೆ ಅಮೆರಿಕಾ ಭೇಟಿಗೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಎರಡೇ ದಿನದಲ್ಲಿ ಅನುಮತಿ ನೀಡಲಾಗಿದೆ. ಆದರೆ, ತಮ್ಮ ಅರ್ಜಿಯನ್ನು ಸಮರ್ಪಕ ವಿವರಣೆ ಇಲ್ಲದೆ ತಿರಸ್ಕರಿಸಲಾಗಿತ್ತು’ ಎಂದು ತಿಳಿಸಿದ್ದಾರೆ.
‘ತಮ್ಮ ಅಮೆರಿಕಾ ಭೇಟಿಗೆ ಅನುಮತಿ ನಿರಾಕರಿಸಿದ್ದರ ಹಿಂದೆ ರಾಜಕೀಯ ಕಾರಣದ ಸಾಧ್ಯತೆ ಇದೆ. ಈ ಘಟನಾವಳಿಗಳನ್ನು ಗಮನಿಸಿದರೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮೊದಲಿಗೆ ನನಗೆ ಏಕೆ ಅನುಮತಿ ನಿರಾಕರಣೆ ಮಾಡಲಾಗಿದೆ?. ಈ ವಿಚಾರ ಬಹಿರಂಗವಾದ ಬಳಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಹಿಂದಿನ ಆದೇಶವನ್ನು ರದ್ದುಪಡಿಸಲಾಗಿದೆಯಾ?’ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ‘ಮಗಾ+ಮಿಗಾ=ಮೆಗಾ’ ಎಂದು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಅದರ ಅರ್ಥ ಏನು?. ಭಾರತದ ತಂತ್ರಜ್ಞಾನ, ನಾವಿನ್ಯತೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಕ್ಕೆ ಬೆಂಬಲ ನಿರಾಕರಿಸಿದರೆ ಹೇಗೆ?. ಈ ಪ್ರಶ್ನೆಗಳಿಗೆ ಕೂಡಲೇ ಉತ್ತರ ಬೇಕಿದೆ. ಕರ್ನಾಟಕ ಈ ಬಗ್ಗೆ ಉತ್ತರ ಬಯಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
So in a U-turn, the Ministry of External Affairs has now decided to revoke its earlier decision and grant me a clearance for an official visit to the United States.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 21, 2025
I had sought permission on 15 May to travel between 14–27 June to represent the Government of Karnataka at two…







