ರಾಜಕೀಯ ಭವಿಷ್ಯ ಕಂಡುಕೊಳ್ಳಲು ಆರೆಸ್ಸೆಸ್ ರಕ್ಷಣೆಗೆ ನಿಲ್ಲುವುದು ಬಿಜೆಪಿಗೆ ಅನಿವಾರ್ಯ: ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಕುರ್ಚಿ ಉಳಿಸಿಕೊಳ್ಳಲು ಮತ್ತು ರಾಜಕೀಯ ಭವಿಷ್ಯ ಕಂಡುಕೊಳ್ಳಲು ಆರೆಸ್ಸೆಸ್ ರಕ್ಷಣೆಗೆ ನಿಲ್ಲುವುದು ಬಿಜೆಪಿಯವರಿಗೆ ಅನಿವಾರ್ಯ. ಏಕೆಂದರೆ ಇವರೆಲ್ಲರ ಜುಟ್ಟು ನಾಗಪುರದ ಹಿಡಿತದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಆರೆಸ್ಸೆಸ್ ನಿಷೇಧದ ನನ್ನ ಹೇಳಿಕೆಯ ಕುರಿತಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸುನಿಲ್ ಕುಮಾರ್ ಅವರು ಸೇರಿದಂತೆ ಬಿಜೆಪಿಯ ನಾಯಕರು ಬಗೆ ಬಗೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಷ್ಟವಿಲ್ಲದಿದ್ದರೂ ಬಿಜೆಪಿಯವರು ಆರೆಸ್ಸೆಸ್ನ್ನು ಸಮರ್ಥನೆ ಮಾಡಿಕೊಳ್ಳಲೇಬೇಕು ಎಂದು ಹೇಳಿದ್ದಾರೆ.
ಆರೆಸ್ಸೆಸ್ ಬಗ್ಗೆ ಬಿಜೆಪಿಯವರ ಪ್ರೀತಿ ಗಂಟಲು ಮೇಲಿನದ್ದೇ ಹೊರತು ಹೃದಯದಾಳದ್ದಲ್ಲ. ನೈಜ ಅಭಿಮಾನ ಇದ್ದರೆ ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಶಾಲೆಯ ಬದಲು ಆರೆಸ್ಸೆಸ್ ಶಾಖೆಗೆ ಕಳಿಸುತ್ತಿದ್ದರು. ಯಾವೊಬ್ಬ ಬಿಜೆಪಿ ನಾಯಕರ ಮಕ್ಕಳೂ ಆರೆಸ್ಸೆಸ್ ಶಾಖೆಗೆ ಹೋಗಿ ಚಡ್ಡಿ ಹಾಕಿಕೊಂಡು ಕೋಲಾಟ ಆಡುತ್ತಿಲ್ಲ. ಬಿಜೆಪಿಗರಿಗೂ ಗೊತ್ತಿದೆ, ಆರೆಸ್ಸೆಸ್ ಸಂಪರ್ಕಕ್ಕೆ ಬಂದರೆ ತಮ್ಮ ಮಕ್ಕಳ ಭವಿಷ್ಯಕ್ಕೆ ಬೆಂಕಿ ಬೀಳುತ್ತದೆ ಎಂದು ಕಿಡಿಕಾರಿದ್ದಾರೆ.
ಅಕಸ್ಮಾತ್ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ನಾಯಕರ ಮಕ್ಕಳಿಗಾಗಿ ‘ಸೆಲ್ಫಿ ವಿತ್ ಶಾಖೆ’ ಎಂದು ಕರೆ ನೀಡಿದರೆ ಬಿಜೆಪಿಗರ ಬಂಡವಾಳ ಆರೆಸ್ಸೆಸ್ಗೂ ತಿಳಿಯುತ್ತದೆ. ಆರೆಸ್ಸೆಸ್ ಎಂಬ ವಿಷಕಾರಿ ಸಂಘಟನೆಯನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿ ನಿಷೇಧ ಹೇರಿದ್ದರು ಎಂಬ ಐತಿಹಾಸಿಕ ಸತ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಅರಿತುಕೊಂಡರೆ ಒಳಿತು ಎಂದು ಹೇಳಿದ್ದಾರೆ.
ದಂಡು ಮತ್ತು ದಾಳಿಗೆ ಹೆದರದಿದ್ದರೂ ಈ ದೇಶದ ಸಂವಿಧಾನಕ್ಕೆ ಹೆದರಲೇಬೇಕು. ಈ ದೇಶದಲ್ಲಿ ಸಂವಿಧಾನವೇ ಪರಮೋಚ್ಚ ಶಕ್ತಿ. ದೇಶದ ಸಮಗ್ರತೆಗೆ ದಕ್ಕೆ ತರುವ, ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನಕ್ಕೆ ಬೆದರಿಕೆಯೊಡ್ದುವ ಆರೆಸ್ಸೆಸ್ ಎಂಬ ಕ್ಯಾನ್ಸರ್ಗೆ ಸಂವಿಧಾನದಲ್ಲಿ ಚಿಕಿತ್ಸೆ ಇದೆ ಎಂಬುದನ್ನು ಬಿಜೆಪಿಯವರು ಮರೆಯದಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ಶತಮಾನೋತ್ಸವ ಆಚರಿಸಲು ಸಿದ್ಧವಾಗಿರುವ ಆರೆಸ್ಸೆಸ್ ನೂರು ವರ್ಷಗಳಲ್ಲಿ ದೇಶಕ್ಕಾಗಿ ಮಾಡಿದ ಕೇವಲ 10 ಸಾಧನೆಗಳನ್ನು ಹೇಳಿ, ದೇಶದ ಆರ್ಥಿಕತೆ ನೀಡಿದ ಕೊಡುಗೆ ಏನು? ಸಮಾಜದ ಸುಧಾರಣೆಗೆ ಮಾಡಿದ ಕೆಲಸವೇನು? ಅಸಮಾನತೆ, ಶೋಷಣೆಗಳ ನಿರ್ಮೂಲನೆಗೆ ಮಾಡಿದ್ದೇನು? ಬಡವರ ಕಲ್ಯಾಣಕ್ಕೆ ಹಮ್ಮಿಕೊಂಡ ಕಾರ್ಯಕ್ರಮಗಳೇನು? ದೇಶದ ಐಕ್ಯತೆಗೆ ದುಡಿದಿದ್ದೇನು? ಎಂದು ಪ್ರಶ್ನಿಸಿದ್ದಾರೆ.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಉಪ್ಪಿನ ಸತ್ಯಾಗ್ರಹದ ವೇಳೆ ದೂರ ಉಳಿದಿದ್ದೇಕೆ? ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸದೆ ಬ್ರಿಟಿಷರ ಪರ ಇದ್ದಿದ್ದೇಕೆ? ಸಂವಿಧಾನದ ಕರಡು ಪ್ರತಿ ಸುಟ್ಟಿದ್ದೇಕೆ? ರಾಷ್ಟ್ರಧ್ವಜವನ್ನು ವಿರೋಧಿಸಿದ್ದೇಕೆ? ದಶಕಗಳ ಕಾಲ ತಿರಂಗಾವನ್ನು ಹಾರಿಸದಿದ್ದದ್ದು ಯಾಕೆ? ದೇಶವು ಮೂರು ಯುದ್ಧಗಳನ್ನು ಎದುರಿಸಿದ್ದಾಗ ಎಲ್ಲಿ ಹೋಗಿತ್ತು ನಿಮ್ಮ ಬಲಿಷ್ಠ ಸಂಘಟನೆ? ದೊಗಲೆ ಚಡ್ಡಿ, ತುಂಡು ಕೋಲು ಹಿಡಿದ ಮಾತ್ರಕ್ಕೆ ಯಾರೂ ಸಂವಿಧಾನವನ್ನು ಎದುರಿಸುವಷ್ಟು ಶಕ್ತಿವಂತರಾಗುವುದೂ ಇಲ್ಲ, ದೇಶ ಭಕ್ತರು ಎನಿಸಿಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
RSS ನಿಷೇಧದ ನನ್ನ ಹೇಳಿಕೆಯ ಕುರಿತಾಗಿ ವಿಜಯೇಂದ್ರ ಅವರು ಹಾಗು ಸುನಿಲ್ ಕುಮಾರ್ ಅವರು ಸೇರಿದಂತೆ ಬಿಜೆಪಿಯ ನಾಯಕರು ಬಗೆಬಗೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 2, 2025
ಕುರ್ಚಿ ಉಳಿಸಿಕೊಳ್ಳಲು, ರಾಜಕೀಯ ಭವಿಷ್ಯ ಕಂಡುಕೊಳ್ಳಲು RSS ರಕ್ಷಣೆಗೆ ನಿಲ್ಲುವುದು ಬಿಜೆಪಿಯವರಿಗೆ ಅತ್ಯಂತ ಅನಿವಾರ್ಯ, ಏಕೆಂದರೆ ಇವರೆಲ್ಲರ ಜುಟ್ಟು ನಾಗಪುರದ ಹಿಡಿತದಲ್ಲಿದೆ.… pic.twitter.com/im18qce2tL







