ಬಾಹ್ಯಾಕಾಶ ತಂತ್ರಜ್ಞಾನ ಬೆಳವಣಿಗೆಗೆ ಕರ್ನಾಟಕದ ಪಾಲು ಹೆಚ್ಚು : ಪ್ರಿಯಾಂಕ್ ಖರ್ಗೆ

ಬೆಂಗಳೂರು, ಅ.9: ಬಾಹ್ಯಾಕಾಶ ತಂತ್ರಜ್ಞಾನ, ಆಡಳಿತ ಸುಧಾರಣೆ ಹಾಗೂ ಸೇವಾ ಅನ್ವಯಿಕೆಗಳ ಉದ್ಯಮ ಬೆಳವಣಿಗೆಯಲ್ಲಿ ಕರ್ನಾಟಕದ ಪಾಲು ಹೆಚ್ಚಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ ಏರ್ಪಡಿಸಿದ್ದ ಎರಡು ದಿನಗಳ ‘ಕರ್ನಾಟಕ ಬಾಹ್ಯಾಕಾಶʼ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಹ್ಯಾಕಾಶ ತಂತ್ರಜ್ಞಾನ ಉದ್ಯಮದಲ್ಲಿ ಈಗಾಗಲೇ ಜಾಗತಿಕವಾಗಿ 400 ಶತಕೋಟಿ ಡಾಲರ್‍ಗಳಿಗಿಂತಲೂ ಹೆಚ್ಚು ಬಂಡವಾಳ ಹೂಡಿಕೆಯಾಗಿದ್ದು, ಕರ್ನಾಟಕವು ಆ ಬೆಳವಣಿಗೆಯ ಬಲವಾದ ಪಾಲನ್ನು ಹೊಂದಿದೆ ಎಂದರು.
ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ತಾಣಗಳಾದ ಇಸ್ರೋ ಮತ್ತು ಡಿಆರ್‍ಡಿಒನಂತಹ ಪ್ರಮುಖ ರಾಷ್ಟ್ರೀಯ ಸಂಸ್ಥೆಗಳಿಗೆ ನೆಲೆಯಾಗಿರುವ ಕರ್ನಾಟಕವು ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ದೀರ್ಘಕಾಲ ನಾಯಕತ್ವವನ್ನು ಪ್ರದರ್ಶಿಸಿದೆ. ನಿಖರವಾದ ಕೃಷಿ ಮತ್ತು ನಗರ ನಿರ್ವಹಣೆಯಿಂದ ಹಿಡಿದು ನೀರಿನ ಸಂರಕ್ಷಣೆ ಮತ್ತು ವಿಪತ್ತು ತಗ್ಗಿಸುವಿಕೆಯವರೆಗೆ ಆಡಳಿತ ಮತ್ತು ಯೋಜನೆಗಾಗಿ ಉಪಗ್ರಹ ದತ್ತಾಂಶವನ್ನು ಬಳಸಿಕೊಂಡು ರಿಮೋಟ್ ಸೆನ್ಸಿಂಗ್ ಸೆಂಟರ್ ಅನ್ನು ಸ್ಥಾಪಿಸಿದ ಮೊದಲ ರಾಜ್ಯಗಳಲ್ಲಿ ನಾವೂ ಸೇರಿದ್ದೇವೆ ಎಂದೂ ಸಚಿವರು ಉಲ್ಲೇಖಿಸಿದರು.
ಈ ಸಂದರ್ಭದಲಿ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕಿಟ್ಸ್ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ್ ಸೇರಿದಂತೆ ಪ್ರಮುಖರಿದ್ದರು.







