ಸರಕಾರಿ ಸೇವಾ ನಿಯಮ ಉಲ್ಲಂಘಿಸಿದರೆ ಯಾರೇ ಆಗಿದ್ದರೂ ಅಮಾನತು ಮಾಡುತ್ತೇವೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು, ಅ. 18: ‘ಸರಕಾರಿ ಸೇವಾ ನಿಯಮವನ್ನು ಉಲ್ಲಂಘನೆ ಮಾಡಿದ್ದು ಕಂಡುಬಂದರೇ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಾರ ಆಪ್ತ ಕಾರ್ಯದರ್ಶಿಯನ್ನೂ ಅಮಾನತು ಮಾಡಿಲ್ಲ. ಸರಕಾರಿ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಯಾರೇ ನಿಯಮ ಉಲ್ಲಂಘಿಸಿದರೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.
ಆರೆಸ್ಸೆಸ್ ಗಣವೇಷ ಹಾಕಲು ಸರಕಾರದ ಅನುಮತಿ ಇದೆಯಾ?. ನಿನ್ನೆಯಷ್ಟೇ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಇದು ಅಕ್ಷರಶಃ ಪಾಲನೆ ಆಗಬೇಕು ಎಂದು ಹೇಳಿದ್ದೇನೆ. ಸುಖಾಸುಮ್ಮನೆ ಯಾರ ಮೇಲೆಯೂ ಕ್ರಮ ಜರುಗಿಸಿಲ್ಲ. ವರದಿ, ಅಗತ್ಯ ಪುರಾವೆ ಇದ್ದರೆ ಮಾತ್ರವೇ ಅಮಾನತು ಮಾಡಲಾಗುವುದು ಎಂದು ಅವರು ತಿಳಿಸಿದರು.
ಚಿತ್ತಾಪುರದಲ್ಲಿ ಬ್ಯಾನರ್ ತೆರವು ಮಾಡಲಾಗಿದೆ. ಮೊದಲ ಬಾರಿ ನಾನು ಸಚಿವನಾಗಿದ್ದ ಸಂದರ್ಭದಲ್ಲಿಯೂ ಆಗ ಕಾಂಗ್ರೆಸ್ ಪಕ್ಷದವರು ಹಾಕಿದ್ದ ಬ್ಯಾನರ್‍ಗಳನ್ನು ನಗರಸಭೆ ತೆರವುಗೊಳಿಸಿ ದಂಡ ಹಾಕಿತ್ತು. ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕಿದ್ದರೂ ದಂಡ ಹಾಕಲಾಗುತ್ತಿದೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿಯೂ ದಂಡ ಹಾಕಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಎಲ್ಲರಿಗೂ ಒಂದೇ ನಿಯಮ ಅನ್ವಯ ಆಗುತ್ತಿದೆ. ಪಥಸಂಚಲನದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡುವುದಕ್ಕೂ, ಅನುಮತಿ ನೀಡುವುದಕ್ಕೂ ವ್ಯತ್ಯಾಸ ಇಲ್ಲವೆ?. ಆರ್‍ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ಏನೇನು ನಡೆದಿದೆ ಎಂದು ಎಲ್ಲರಿಗೂ ಗೊತ್ತಿದೆ. ಏನಾದರೂ ತೊಂದರೆಯಾದರೆ ಯಾರು ಜವಾಬ್ದಾರಿ? ಎಂದು ಅವರು ಪ್ರಶ್ನಿಸಿದರು.







