ನೋಂದಾಯಿತ ಸಂಸ್ಥೆಯಲ್ಲ ಎಂದು ಆರೆಸ್ಸೆಸ್ ಲಿಖಿತ ರೂಪದಲ್ಲಿ ಅಧಿಕೃತವಾಗಿ ತಿಳಿಸಿದೆ : ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ತನ್ನದು ನೋಂದಾಯಿತ ಸಂಸ್ಥೆಯಲ್ಲ ಎಂದು ಆರೆಸ್ಸೆಸ್ ಲಿಖಿತ ರೂಪದಲ್ಲಿ ಅಧಿಕೃತವಾಗಿ ತಿಳಿಸಿದೆ. ಅದು ನಿಜವಾಗಿಯೂ ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದರೆ, ಪಾರದರ್ಶಕವಾಗಿ ಮತ್ತು ಕಾನೂನುಬದ್ಧವಾಗಿ ಕೆಲಸ ಮಾಡುವ ಲಕ್ಷಾಂತರ ಎನ್ಜಿಒಗಳಂತೆ ಏಕೆ ನೋಂದಾಯಿಸಬಾರದು? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ಹಂಚಿಕೊಂಡಿರುವ ಅವರು, ಆರೆಸ್ಸೆಸ್ಗೆ ದೇಣಿಗೆಗಳು ಎಲ್ಲಿಂದ ಬರುತ್ತವೆ ಮತ್ತು ದಾನಿಗಳು ಯಾರು? ನೋಂದಾಯಿಸದ ಸಂಸ್ಥೆಯೊಂದರ ಮುಖ್ಯಸ್ಥರು ಪ್ರಧಾನಿ ಮತ್ತು ಗೃಹ ಸಚಿವರಿಗೆ ಸಮಾನವಾಗಿ ಅಡ್ವಾನ್ಸಡ್ ಸೆಕ್ಯುರಿಟಿ ಲಿಯಾಸನ್ ಪ್ರೋಟೋಕಾಲ್ ಅನ್ನು ಏಕೆ ಪಡೆಯುತ್ತಾರೆ? ತೆರಿಗೆ ಪಾವತಿದಾರರ ಹಣವನ್ನು ಆರೆಸ್ಸೆಸ್ ಮುಖ್ಯಸ್ಥರ ಮೇಲೆ ಏಕೆ ಖರ್ಚು ಮಾಡಲಾಗುತ್ತಿದೆ? ಎಂದು ಕೇಳಿದ್ದಾರೆ.
ಪೂರ್ಣ ಸಮಯದ ಪ್ರಚಾರಕರಿಗೆ ಯಾರು ಹಣ ಪಾವತಿಸುತ್ತಾರೆ ಮತ್ತು ಸಂಸ್ಥೆಯ ದೈನಂದಿನ ಕಾರ್ಯಾಚರಣೆಗಳು ಹಾಗೂ "ಸಾಮಾಜಿಕ" ಅಭಿಯಾನಗಳಿಗೆ ಯಾರು ಹಣಕಾಸು ಒದಗಿಸುತ್ತಾರೆ? ಆರೆಸ್ಸೆಸ್ ಅನ್ನು ನೋಂದಾಯಿಸದಿದ್ದರೆ ಮತ್ತು ಹೊಣೆಗಾರಿಕೆ ಹೊಂದಿಲ್ಲದ್ದಾಗಿದ್ದರೆ, ದೇಶಕ್ಕೆ ಸೇವೆ ಸಲ್ಲಿಸುವುದಾಗಿ ಹೇಳಿಕೊಳ್ಳುತ್ತಾ ಪರಿಶೋಧನೆ ಹಾಗೂ ತೆರಿಗೆಗಳನ್ನು ವಂಚಿಸುತ್ತಿಲ್ಲವೇ? ಇದು ಅವರನ್ನು ಹೇಗೆ ದೇಶ ಭಕ್ತರನ್ನಾಗಿಸುತ್ತದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.







