ಕಲಬುರಗಿಯಲ್ಲಿ 1 ಸಾವಿರ ಕೋಟಿ ರೂ.ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ : ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ(ಲೀಪ್)ಅಡಿಯಲ್ಲಿ ಕಲಬುರಗಿಯಲ್ಲಿ ಹೊಸ ಉದ್ಯಮಶೀಲತಾ ಕೇಂದ್ರ ಪ್ರಾರಂಭಿಸುವುದಾಗಿ ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಲೀಪ್ ಒಂದು ಸಾವಿರ ಕೋಟಿ ರೂ. ವೆಚ್ಚದ ಐದು ವರ್ಷಗಳ ಉಪಕ್ರಮವಾಗಿದೆ. ಪ್ರಾದೇಶಿಕ ಉದ್ಯಮಶೀಲತೆಗೆ ಚೇತರಿಕೆ ನೀಡಲು, ನಾವೀನ್ಯತೆ ವಿಕೇಂದ್ರೀಕರಿಸಲು ಮತ್ತು ರಾಜ್ಯದ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಲಸ್ಟರ್ಗಳಲ್ಲಿ ಆರ್ಥಿಕ ಬೆಳವಣಿಗೆ ತ್ವರಿತಗೊಳಿಸಲು ಇದು ನೆರವಾಗಲಿದೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದಾದ್ಯಂತ ಕೃಷಿ-ತಂತ್ರಜ್ಞಾನ, ಗ್ರಾಮೀಣ ನಾವೀನ್ಯತೆ ಮತ್ತು ಯುವಜನರಲ್ಲಿ ಉದ್ಯಮಶೀಲತೆ ಉತ್ತೇಜಿಸಲು 15 ಸಾವಿರ ಚದರ ಅಡಿ ವಿಸ್ತೀರ್ಣದ ಹೊಸ ನವೋದ್ಯಮ ಕೇಂದ್ರ ಮತ್ತು ಪ್ರಾಥಮಿಕ ಮಾದರಿ ಪ್ರಯೋಗಾಲಯ ಸ್ಥಾಪನೆಯಾಗಲಿದ್ದು ಮುಂದಿನ ವರ್ಷದ ಜನವರಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕೃಷಿಕಲ್ಪ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿರುವ ಉದ್ಯಮಶೀಲತಾ ಕೇಂದ್ರವು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಾವೀನ್ಯತೆ ವ್ಯವಸ್ಥೆ ಬಲಪಡಿಸುವ ಗುರಿ ಹೊಂದಿದೆ. ಕೃಷಿ, ಸಂಬಂಧಿತ ವಲಯಗಳು, ಗ್ರಾಮೀಣ ನಾವೀನ್ಯತೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸಲಿದೆ ಎಂದು ಅವರು ಹೇಳಿದ್ದಾರೆ.
ಈ ಉಪಕ್ರಮದ ಭಾಗವಾಗಿ, ಕಲಬುರಗಿ ಜಿಲ್ಲಾಡಳಿತವು 15 ಸಾವಿರ ಚದರ ಅಡಿ ವಿಸ್ತೀರ್ಣದ ಬಳಕೆಗೆ ಸಿದ್ಧವಾದ ಸ್ಥಳಾವಕಾಶ ಹಂಚಿಕೆ ಮಾಡಿದೆ. ಇದು ಈ ಪ್ರದೇಶಕ್ಕೆ ಮೀಸಲಾದ ನವೋದ್ಯಮ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ನವೋದ್ಯಮಗಳ ಸಂಸ್ಥಾಪಕರು, ಕೃಷಿ ಉದ್ಯಮಿಗಳು, ನಾವೀನ್ಯಕಾರರು ಮತ್ತು ಪೂರಕ ಉದ್ದಿಮೆಗಳ ಪಾಲುದಾರರಿಗೆ ಅಗತ್ಯ ನೆರವು ಒದಗಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
ಈ ಕೇಂದ್ರವು ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ ಮತ್ತು ಹಣಕಾಸು ನೆರವಿನ ಲಭ್ಯತೆ ಚೌಕಟ್ಟು ಆಧರಿಸಿ ಕಾರ್ಯನಿರ್ವಹಿಸಲಿದೆ, ನವೋದ್ಯಮಗಳ ವೇಗವರ್ಧನೆ, ಸಾಮರ್ಥ್ಯ ವೃದ್ಧಿ ಮತ್ತು ಉದ್ಯಮಶೀಲತೆಗೆ ಉತ್ತೇಜನ ತತ್ವಗಳಡಿ ಇದು ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಮೂಲಸೌಲಭ್ಯ ಮತ್ತು ಮಾರುಕಟ್ಟೆ ಲಭ್ಯತೆ ಅಡೆತಡೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮೂಲಕ ನವೋದ್ಯಮಗಳು ಸ್ಥಳೀಯವಾಗಿ ವಿಶ್ವ ದರ್ಜೆಯ ನಾವೀನ್ಯತೆಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ಪರೀಕ್ಷಿಸಲು ಅನುವು ಮಾಡಿಕೊಡಲು ಅತ್ಯಾಧುನಿಕ ಮೂಲಮಾದರಿ ಪ್ರಯೋಗಾಲಯವನ್ನು (ಪ್ರೊಟೊಟೈಪಿಂಗ್ ಲ್ಯಾಬ್) ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕಲಬುರಗಿಯು ಗ್ರಾಮೀಣ ಕರ್ನಾಟಕದ ಬಳಕೆಯಾಗದ ಅಪಾರ ಸಾಮರ್ಥ್ಯ ವನ್ನು ಪ್ರತಿನಿಧಿಸುತ್ತದೆ. ಈ ಪ್ರದೇಶದಲ್ಲಿ ಶೇ.70ಕ್ಕೂ ಹೆಚ್ಚು ಉದ್ಯೋಗಿಗಳು ಕೃಷಿ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ. ‘ಲೀಪ್’ ಉಪಕ್ರಮದಡಿ ಮತ್ತು ಹೊಸ ಉದ್ಯಮಶೀಲತಾ ಕೇಂದ್ರದ ಮೂಲಕ, ನಾವು ತಂತ್ರಜ್ಞಾನ, ನಾವೀನ್ಯತೆ ಮತ್ತು ಅವಕಾಶಗಳನ್ನು ನೇರವಾಗಿ ನಮ್ಮ ಸಮುದಾಯಗಳಿಗೆ ತಲುಪಿಸುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಣ ಅಂತರವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತಿದ್ದೇವೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯದ ಐಟಿ-ಬಿಟಿ ವಲಯದ ವಹಿವಾಟು 1.5 ಲಕ್ಷ ಕೋಟಿ ರೂ. ದಾಟಿದೆ. ‘ಲೀಪ್’ ಉಪಕ್ರಮದಡಿ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯೊಂದಿಗೆ, ಈ ಶ್ರೇಷ್ಠತಾ ಕೇಂದ್ರವು ಕಲಬುರಗಿಯ ಯುವಕರಿಗೆ ಕೃಷಿ-ತಂತ್ರಜ್ಞಾನ, ಡೀಪ್-ಟೆಕ್ ಮತ್ತು ಸಂಬಂಧಿತ ವಲಯದ ನಾವೀನ್ಯತೆಗಳ ಮೂಲಕ ಸುಸ್ಥಿರ ಜೀವನೋಪಾಯ ನಿರ್ಮಿಸಲು ಶಕ್ತಿ ತುಂಬಲಿದೆ ಎಂದು ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಾಚೆಗೆ(ಬಿಯಾಂಡ್ ಬೆಂಗಳೂರು) ನಾವೀನ್ಯತೆಯ ಪ್ರಯೋಜನವು ಎಲ್ಲರಿಗೂ ಸಮಾನವಾಗಿ ದೊರೆಯುವಂತೆ ಮಾಡುವ ರಾಜ್ಯ ಸರಕಾರದ ಧ್ಯೇಯವನ್ನು ‘ಲೀಪ್’ ಉಪಕ್ರಮವು ಪ್ರತಿಬಿಂಬಿಸುತ್ತದೆ. ಕಲಬುರಗಿಯಲ್ಲಿ ಆರಂಭವಾಗಲಿರುವ ಉದ್ಯಮಶೀಲತಾ ಕೇಂದ್ರವು ಈ ಪ್ರದೇಶದ ಕೃಷಿ ಸಾಮರ್ಥ್ಯ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಸಾಮರ್ಥ್ಯವನ್ನು ಬಳಸಿಕೊಳ್ಳಲಿದೆ, ಗ್ರಾಮೀಣ ನಾವೀನ್ಯಕಾರರು ಸುಸ್ಥಿರ ಮತ್ತು ಸ್ಪರ್ಧಾತ್ಮಕ ಉದ್ಯಮಗಳನ್ನು ಬೆಳೆಸಲು ಅನುವು ಮಾಡಿಕೊಡಲಿದೆ ಎಂದು ಅವರು ವಿವರಿಸಿದ್ದಾರೆ.
ನವೋದ್ಯಮಗಳಿಗೆ ಚಿಮ್ಮುಹಲಗೆಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು (ಇನ್ಕ್ಯುಬೇಟರ್) ಮತ್ತು ವ್ಯವಸ್ಥೆಯ ಬಲವರ್ಧನೆ: ಪ್ರತ್ಯೇಕ ಕೆಲಸದ ಸ್ಥಳಗಳು, ರಚನಾತ್ಮಕ ವೇಗವರ್ಧಿಸುವ ಕಾರ್ಯಕ್ರಮಗಳು ಮತ್ತು ನವೋದ್ಯಮಗಳು ಹಾಗೂ ಗ್ರಾಮೀಣ ಉದ್ಯಮಿಗಳಿಗೆ ಅಗತ್ಯ ಬೆಂಬಲ.
ಮಾರ್ಗದರ್ಶನ ಮತ್ತು ಸಾಮರ್ಥ್ಯ ವೃದ್ಧಿ: ತಜ್ಞರ ನೇತೃತ್ವದ ಮಾರ್ಗದರ್ಶನ, ಮಾರುಕಟ್ಟೆ ಸಂಪರ್ಕ ಮತ್ತು ಕೌಶಲ-ಅಭಿವೃದ್ಧಿ ಮಾರ್ಗದರ್ಶನ-ಮಾರುಕಟ್ಟೆ ಲಭ್ಯತೆ-ಹಣಕಾಸು ನೆರವು.
ಕೃಷಿ ಹಾಗೂ ಸಂಬಂಧಿತ ವಲಯಗಳಿಗೆ ಡೀಪ್-ಟೆಕ್ ಮತ್ತು ಐಟಿ ಸೇವೆಗಳು: ಗ್ರಾಮೀಣ ಕೃಷಿ ವಹಿವಾಟಿನಲ್ಲಿ ತಂತ್ರಜ್ಞಾನ ಅಳವಡಿಕೆ ಹೆಚ್ಚಿಸಲು ಐಒಟಿ, ರೋಬೊಟಿಕ್ಸ್, ಎಐ, ಆಹಾರ ಸಂಸ್ಕರಣೆ, ಯಾಂತ್ರೀಕರಣ, ಎಆರ್/ವಿಆರ್ ಮತ್ತು ಐಟಿ-ಸೌಲಭ್ಯಗಳ ಸೇವೆಗಳಿಗೆ ಪ್ರಯೋಗಾಲಯಗಳು.
ಮೂಲ ಮಾದರಿ ಮತ್ತು ಉತ್ಪನ್ನ ಅಭಿವೃದ್ಧಿ: ನವೋದ್ಯಮಗಳು ಸ್ಥಳೀಯವಾಗಿ ನಾವೀನ್ಯತೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಸಹಾಯ ಮಾಡುವ ಪೂರ್ಣ ಪ್ರಮಾಣದ ಮೂಲಮಾದರಿ ಪ್ರಯೋಗಾಲಯವು, ವೆಚ್ಚ ತಗ್ಗಿಸಲಿದೆ.
ಸ್ಥಳೀಯ ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಬೆಳವಣಿಗೆ: ಸ್ಥಳೀಯವಾಗಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವುದು, ಗ್ರಾಮೀಣ-ನಗರ ವಲಸೆಯನ್ನು ಕಡಿಮೆ ಮಾಡುವುದು. ಸರಕಾರಿ ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳಲ್ಲಿ ಹೂಡಿಕೆ ಮಾಡುವವರು ಮತ್ತು ಇತರರ ಪಾಲುದಾರಿಕೆಯಡಿ 15 ಸಾವಿರ ಚದರ ಅಡಿಗಳಷ್ಟು ಪ್ರತ್ಯೇಕ ನವೋದ್ಯಮ ಸ್ಥಳಾವಕಾಶ ಲಭ್ಯವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.







