371(ಜೆ) ಅಡಿ ಹೊರಡಿಸಲಾಗುವ ಆದೇಶಗಳ ಅನುಷ್ಠಾನದಲ್ಲಿ ವಿಳಂಬ : ಪ್ರಿಯಾಂಕ್ ಖರ್ಗೆ ಅಸಮಾಧಾನ

ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರತ ಸಂವಿಧಾನ ಅನುಚ್ಛೇದ 371 (ಜೆ) ಅಡಿ ಹೊರಡಿಸಲಾಗಿರುವ ಆದೇಶಗಳನ್ನು ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ಬದ್ಧತೆಯನ್ನು ತೋರಿಸುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 371 (ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಪ್ರಯುಕ್ತ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಲು ತಮ್ಮ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಂಪುಟ ಉಪಸಮಿತಿಯ ಸಭೆಯಲ್ಲಿ ಅವರು ಬೇಸರ ಹೊರ ಹಾಕಿದರು.
ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಬಂಧ ಚರ್ಚೆ ನಡೆಸಿದ ಉಪ ಸಮಿತಿಯು, ಅವುಗಳನ್ನು ಶೀಘ್ರದಲ್ಲಿ ಜಾರಿಗೊಳಿಸಬೇಕು. ಅಲ್ಲದೇ, ಮುಂಭಡ್ತಿ ನೀಡುವಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಮಿಕ್ಕುಳಿದ ವೃಂದದ ಜೇಷ್ಠತಾ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸದೆ ಒಂದೇ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವಂತೆ ಸ್ಪಷ್ಟ ಸೂಚನೆ ನೀಡಿತು.
ಸಚಿವಾಲಯದ ಅಧಿಕಾರಿ ಹಾಗೂ ನೌಕರರ ಜೇಷ್ಠತೆಯನ್ನು 2014ರ ಎಪ್ರಿಲ್ 21ರಿಂದ ಜಾರಿಗೆ ಬರುವಂತೆ ಕಾಲ್ಪನಿಕ ಜೇಷ್ಠತೆ ಪಟ್ಟಿಯನ್ನು ಸಿದ್ಧಪಡಿಸಲು ನೀಡಲಾಗಿದ್ದ ಸೂಚನೆಗೆ ಅನುಗುಣವಾಗಿ ಸಹಾಯಕ, ಹಿರಿಯ ಸಹಾಯಕ, ಶಾಖಾಧಿಕಾರಿ, ಶೀಘ್ರಲಿಪಿಗಾರರು ಹಾಗೂ ಪತ್ರಾಂಕಿತ ಆಪ್ತ ಸಹಾಯಕ ವೃಂದದ ಅಧಿಕಾರಿ/ನೌಕರರ ಜೇಷ್ಠತೆಯನ್ನು ಮರು ನಿಗದಿಪಡಿಸಲಾಗಿದೆ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಅಧಿಕಾರಿಗಳು ಸಂಪುಟ ಉಪ ಸಮಿತಿಯ ಮುಂದೆ ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಪೈಕಿ, 5000 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, 4193 ಅಭ್ಯರ್ಥಿಗಳು ಅಂತಿಮವಾಗಿ ಆಯ್ಕೆಯಾಗಿದ್ದಾರೆ, ಈ ಪೈಕಿ 3837 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ನ್ಯಾಯಾಲಯದ ಮುಂದಿದ್ದು, ಅಂತಹ ಪ್ರಕರಣಗಳ ಸ್ವರೂಪ, ಪ್ರಸ್ತುತ ಸ್ಥಿತಿ ಗತಿ ಕುರಿತ ಮಾಹಿತಿ ನೀಡುವುದರ ಜೊತೆಗೆ ಅವುಗಳ ಇತ್ಯರ್ಥಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಪೂರ್ಣ ವಿವರಗಳನ್ನು ಒಂದು ವಾರದ ಒಳಗಾಗಿ ಸಂಪುಟ ಉಪ ಸಮಿತಿಗೆ ಸಲ್ಲಿಸಲು ಸಚಿವ ಪ್ರಿಯಾಂಕ್ ಖರ್ಗೆ ಸೂಚಿದರು.
ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ, ಕಾರಣ ಕೇಳಿ ನೋಟಿಸ್ ನೀಡಲು ಸೂಚಿಸಿದ ಪ್ರಿಯಾಂಕ್ ಖರ್ಗೆ, ಅನುಪಾಲನ ವರದಿ ಸಲ್ಲಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಸಂಪಟ ಉಪಸಮಿತಿಯ ಸದಸ್ಯರಾದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು, ಪೌರಾಡಳಿತ ಸಚಿವ ರಹೀಂಖಾನ್ ಪಾಲ್ಗೊಂಡಿದ್ದರು.







