ಹೊರವರ್ತುಲ ರಸ್ತೆ ಕಾರಿಡಾರ್ | ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಬದ್ಧ: ಪ್ರಿಯಾಂಕ್ ಖರ್ಗೆ

ಬೆಂಗಳೂರು : ನಗರದ ಹೊರ ವರ್ತುಲ ರಸ್ತೆ ಕಾರಿಡಾರ್‌ನಲ್ಲಿ ಉದ್ಭವಿಸಿರುವ ಮೂಲಸೌಕರ್ಯಗಳ ಕೊರತೆಗಳಿಗೆ ಕಾಲಮಿತಿಯ ಪರಿಹಾರ ಒದಗಿಸುವುದಾಗಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಬೆಂಗಳೂರಿನ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘವು (ಒಆರ್‌ಆರ್‍ಸಿಎ) ಪ್ರಿಯಾಂಕ್ ಖರ್ಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೇರಿದಂತೆ ಹಿರಿಯ ಸರಕಾರಿ ಅಧಿಕಾರಿಗಳ ಜೊತೆಗೆ ನಡೆಸಿದ ಸಭೆಯಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದಿತು.
ನಗರದ ಪ್ರಮುಖ ತಂತ್ರಜ್ಞಾನ ಮತ್ತು ವಾಣಿಜ್ಯ ಕಾರಿಡಾರ್ ಎದುರಿಸುತ್ತಿರುವ ಗಂಭೀರ ಸ್ವರೂಪದ ಮೂಲಸೌಕರ್ಯ, ನಾಗರಿಕ ಸೌಲಭ್ಯ ಮತ್ತು ಸಂಚಾರ ದಟ್ಟಣೆ ಸವಾಲುಗಳನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಸಂವಾದದಲ್ಲಿ ಮಾತನಾಡಿದ ಉದ್ಯಮದ ಪ್ರತಿನಿಧಿಗಳು, ಮೆಟ್ರೊ ನಿಲ್ದಾಣಗಳಿಗೆ ಕೊನೆಯ ಹಂತದ ಸಂಪರ್ಕ, ಸರ್ವೀಸ್ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ದುಃಸ್ಥಿತಿ, ಪ್ರಮುಖ ಜಂಕ್ಷನ್‍ಗಳಲ್ಲಿನ ಸಂಚಾರ ದಟ್ಟಣೆ, ಹೆಚ್ಚಿನ ಜನಸಾಂದ್ರತೆಯ ಪ್ರದೇಶಗಳಲ್ಲಿ ಕಸ ಸಂಗ್ರಹ, ನಿರಂತರ ನಿರ್ಮಾಣ ಚಟುವಟಿಕೆಗಳಿಂದ ಉದ್ಭವಿಸಿರುವ ದೂರಸಂಪರ್ಕ ಅಡಚಣೆಗಳು ಮತ್ತು ವಿವಿಧ ಸಮೂಹ ಸಾರಿಗೆ ಸೌಲಭ್ಯಗಳ ಮಧ್ಯೆ ಸಮನ್ವಯತೆಯಂತಹ ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾವಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಹೊರ ವರ್ತುಲ ರಸ್ತೆ ಕಾರಿಡಾರ್ ರಾಜ್ಯದ ಜಾಗತಿಕ ತಂತ್ರಜ್ಞಾನ ಆರ್ಥಿಕತೆಯ ಕೇಂದ್ರಬಿಂದುವಾಗಿದೆ. ಸಮಸ್ಯೆಗಳನ್ನು ಸರಿಪಡಿಸಲು ಕಾಲಮಿತಿ ಹೊಂದಿದ ಹಾಗೂ ಹೆಚ್ಚಿನ ಪರಿಣಾಮ ಬೀರುವ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಹೇಳಿದರು.
ಈ ಪ್ರದೇಶದ ಸಂಚಾರ ಮತ್ತು ಮೂಲಸೌಕರ್ಯ ಅಡಚಣೆಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಾಲಮಿತಿ ಒಳಗೆ ಒದಗಿಸುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದರು.
ಜಿಬಿಎ ರಚನೆಯಿಂದ ಈಗಾಗಲೆ ವಿವಿಧ ಇಲಾಖೆಗಳಲ್ಲಿ ಸಮನ್ವಯತೆ ಹೆಚ್ಚಿದೆ. ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವುದರ ವೇಗವೂ ಹೆಚ್ಚಳಗೊಂಡಿದೆ. ವಿಶೇಷವಾಗಿ ಕಾಡುಬೀಸನಹಳ್ಳಿ, ಬೆಳ್ಳಂದೂರು ಮತ್ತು ಮಾರತ್ತಹಳ್ಳಿಯಂತಹ ಹೆಚ್ಚಿನ ದಟ್ಟಣೆಯ ಸ್ಥಳಗಳಲ್ಲಿ ಯೋಜನೆಗಳ ಸುಗಮ ಅನುಷ್ಠಾನ ಖಚಿತಪಡಿಸಿಕೊಳ್ಳಲು ಬಿಬಿಎಂಪಿ, ಬಿಎಂಆರ್‍ಸಿಎಲ್, ಸಂಚಾರ ಪೊಲೀಸರು ಮತ್ತು ಇತರ ಏಜೆನ್ಸಿಗಳ ನಡುವೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದರು.
ಸಭೆಯಲ್ಲಿ ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ರವಿಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.







