ಅಸಾಂವಿಧಾನಿಕ ಸಂಘಟನೆ ಆರೆಸ್ಸೆಸ್‍ಗೆ ನಾನೇಕೆ ಹೆದರಬೇಕು : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಹೆದರಿಸುವುದು, ಬೆದರಿಸುವುದು, ಕೋರ್ಟ್‍ಗೆ ಹೋಗುವುದು ಆರೆಸ್ಸೆಸ್ ತಂತ್ರ. ಆರೆಸ್ಸೆಸ್ ಒಂದು ನೋಂದಣಿಯಾಗದ, ನಿಯಮಗಳಿಗೆ ಒಳಪಡದ ಮತ್ತು ಅಸಾಂವಿಧಾನಿಕ ಸಂಘಟನೆ. ಅವರಿಗೇಕೆ ನಾನು ಹೆದರಬೇಕು? ಬುದ್ಧ, ಬಸವಣ್ಣನವರ ತತ್ವಗಳು, ಅಂಬೇಡ್ಕರ್ ಅವರ ಹೋರಾಟದ ರಕ್ತ ನನ್ನಲ್ಲಿದೆ. ಆರೆಸ್ಸೆಸ್ ನವರ ಬಳಿ ಕಲಿಯಲು ಏನಿದೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಸಂಘಟನೆಯನ್ನು ನೋಂದಾಯಿಸಿಕೊಳ್ಳಲು ಆರೆಸ್ಸೆಸ್ ಹಿಂಜರಿಯುತ್ತಿರುವುದು ಏಕೆ? ಅವರಿಗೆ ಇಷ್ಟೊಂದು ದೇಣಿಗೆ ಎಲ್ಲಿಂದ ಬರುತ್ತಿದೆ? ಗೃಹ ಸಚಿವರು, ವಿದೇಶಾಂಗ ಸಚಿವರಿಗೆ ಸಿಗುವಂತಹ ಎಎಸ್‍ಎಲ್ ಭದ್ರತೆ ಮೋಹನ್ ಭಾಗವತ್ ಅವರಿಗೆ ಏಕೆ? ಇವರು ಯಾರೂ ತೆರಿಗೆ ಕಟ್ಟುವವರಲ್ಲ. ಆದರೆ ತೆರಿಗೆ ಪಾವತಿದಾರರ ಹಣವನ್ನು ಇವರ ಭದ್ರತೆಗೆ ಏಕೆ ದುಂದು ವೆಚ್ಚ ಮಾಡಲಾಗುತ್ತಿದೆ? ಎಂದು ಕೇಳಿದ್ದಾರೆ.
ನಾವು ಇಂತಹ ಪ್ರಶ್ನೆಗಳನ್ನು ಕೇಳುತ್ತಿರುವುದಕ್ಕಾಗಿ ನಮ್ಮ ವಿರುದ್ಧ ಮಾನಹಾನಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇಡೀ ದೇಶದ ತುಂಬಾ ಅವರು ಕೇಸ್‍ಗಳನ್ನು ದಾಖಲಿಸಿದರೂ ನಮ್ಮ ದನಿಯನ್ನು ಅಡಗಿಸಲು ಸಾಧ್ಯವಿಲ್ಲ. ನಾವು ಸತ್ಯದ ಪರವಾಗಿ ಇರುವವರು. ಆರೆಸ್ಸೆಸ್ ನ ಸತ್ಯ ಇಂದಲ್ಲ, ನಾಳೆ ಹೊರಬರಲೇಬೇಕು. 100 ವರ್ಷದಿಂದ ಸಂಘಟನೆ ಇದೆ ಎಂದ ಮಾತ್ರಕ್ಕೆ ಇನ್ನೂ 100 ವರ್ಷ ನಡೆಸಲು ಮಾನ್ಯತೆ ಇದೆ ಎಂದಲ್ಲ. ಯಾವುದೇ ಸಂಘಟನೆಯಾದರೂ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.







