ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದನ್ನು ನಿಯಂತ್ರಿಸುವ ಬಗ್ಗೆ ಚಿಂತನೆ : ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ರಾಜ್ಯದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದನ್ನು ನಿಯಂತ್ರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆ ವೇಳೆ ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಪ್ರಸ್ತಾಪಿಸಿದ ವಿಚಾರವಾಗಿ ಪ್ರತಿಕ್ರಿಯಿದ ಅವರು, ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದನ್ನು ನಿಯಂತ್ರಿಸುವ ಸಂಬಂಧ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಈಗಾಗಲೇ ಚರ್ಚೆ ನಡೆಸುತ್ತಿದೆ. ನಾವು ರಾಜ್ಯದಲ್ಲೂ ಜವಾಬ್ದಾರಿಯುತ ಬಳಕೆದಾರರು ಎಐ ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆ ಏನು ಮಾಡಬೇಕು ಎಂದು ಈಗಾಗಲೇ ಸಮಾಲೋಚನೆ ಮಾಡುತ್ತಿದ್ದೇವೆ ಎಂದರು.
ಇದು ಗಭೀರವಾದ ವಿಚಾರವಾಗಿದೆ. ಈ ಬಗ್ಗೆ ಫಿನ್ಲ್ಯಾಂಡ್ ಕ್ರಮ ತೆಗೆದುಕೊಂಡಿದೆ. ಇಂಗ್ಲೆಂಡ್ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ. ಇತ್ತೀಚಿಗೆ ಆಸ್ಟ್ರೇಲಿಯಾ ಎರಡು ತಿಂಗಳ ಹಿಂದೆ 16 ವರ್ಷದ ವರೆಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದಕ್ಕೆ ನಿರ್ಬಂಧ ಹೇರಿದೆ. ನಾವೂ ರಾಜ್ಯದಲ್ಲಿ ಎಐ ವಿಚಾರವಾಗಿ ಹಾಗೂ ಸೋಷಿಯಲ್ ಮೀಡಿಯಾದ ಮೇಲೆ ಏನೆಲ್ಲ ಕ್ರಮ ತಗೊಳಬಹುದು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಅವರು ಉಲ್ಲೇಖಿಸಿದರು.





