ಕೇಂದ್ರ ಸರಕಾರದ ಮಾತು ಕೇಳದಿದ್ದರೆ ಐಟಿ, ಈಡಿ ಕಿರುಕುಳ : ಪ್ರಿಯಾಂಕ್ ಖರ್ಗೆ ಆರೋಪ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಕೇಂದ್ರ ಸರಕಾರದ ಮಾತು ಕೇಳದ ಉದ್ಯಮಿಗಳಿಗೆ ಉದ್ದೇಶ ಪೂರಕವಾಗಿಯೇ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಇಲಾಖೆಗಳಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಉದ್ಯಮಿ ಸಿ.ಜೆ.ರಾಯ್ ಆತ್ಮಹತೆ ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರಕಾರದ ಮಾತು ಕೇಳದ ಉದ್ಯಮಿಗಳಿಗೆ ಈಡಿ, ಐಟಿ ಹಾಗೂ ಜಿಎಸ್ಟಿ ಬಳಸಿಕೊಂಡು ಕಿರುಕುಳ ಕೊಡುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆಪಾದಿಸಿದರು.
ಕೇಂದ್ರಕ್ಕೆ ತಲೆ ಭಾಗದ ಉದ್ಯಮಿಗಳಿಗೆ ಈ ಕಿರುಕುಳ ಆಗುತ್ತಿರುವ ಸಾಕಷ್ಟು ಉದಾಹರಣೆ ಇದೆ. ಆದರೆ, ಅಂಬಾನಿ, ಅದಾನಿನಂತರ ಉದ್ಯಮಿಗಳಿಗೆ ಈಡಿ, ಐಟಿ ಕಿರುಕುಳ ಇರುವುದಿಲ್ಲ. ಬದಲಾಗಿ, ಅವರ ಪರವಾಗಿಯೇ ಸರಕಾರ ಕೆಲಸ ಮಾಡುವುದಲ್ಲದೆ, ಅವರ ಉದ್ಯಮ ಬೆಳೆಸಲು ನೀತಿಗಳನ್ನೆ ಬದಲಾವಣೆ ಮಾಡುತ್ತಿದೆ ಎಂದು ಅವರು ಹೇಳಿದರು.
ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂದರೆ ಕಿರುಕುಳ ಎಷ್ಟು ಆಗಿರಬಾರದು ನೋಡಿ. ಸಾಮಾನ್ಯ ಜನರಿಗೂ ಇಂತಹ ಕಿರುಕುಳ ಆಗುತ್ತಿದೆ. ಬೇಕಾದರೆ ಸಮೀಕ್ಷೆ ಮಾಡಿ ಗೊತ್ತಾಗುತ್ತದೆ. ಜನರಿಗೆ ತೊಂದರಿಗೆ ಕೊಡಲು ಕೇಂದ್ರ ಸರಕಾರದ ಬಳಿ ಹೊಸ ಆಯುಧವೇ ಇದೆ. ಕಿರುಕುಳದ ಬಗ್ಗೆ ನಾನು ಹೇಳುತ್ತಿಲ್ಲ, ಅವರ ಕುಟುಂಬ ಹೇಳುತ್ತಿದೆ. ಇದರ ಬಗ್ಗೆ ತನಿಖೆ ಆಗಲಿ ಎಂದು ಅವರು ಒತ್ತಾಯಿಸಿದರು.







