ಮೋದಿ, ಅಮಿತ್ ಶಾ ಅವರಿಂದಲೇ ಕುಮಾರಸ್ವಾಮಿಯನ್ನು ಸಿಎಂ ಮಾಡಲು ತಯಾರಿ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಪ್ರಧಾನಮಂತ್ರಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಯಾರಿ ನಡೆಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಸುರೇಶ್ ಗೌಡ, ಸಿದ್ದರಾಮಯ್ಯ ದಾಖಲೆಯ ಬಜೆಟ್ ಮಂಡಿಸಿದ ಮರು ದಿನವೇ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ್ದ ಜಾಹೀರಾತು ನೋಡಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿಕೆಯಲ್ಲಷ್ಟೇ ಹಾಲು-ಜೇನು, ವಾಸ್ತವದಲ್ಲಿ ಅಕ್ಕಪಕ್ಕ ಕೂಳಿತರೂ 10 ನಿಮಿಷ ಮುಖಕೊಟ್ಟು ಮಾತನಾಡುವುದಿಲ್ಲ. ಕುರ್ಚಿ ಕದನ ಜೋರಾಗಿದೆ ಎಂದು ಟೀಕಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬಜೆಟ್ ಮೇಲೆ ಚರ್ಚೆ ಮಾಡದೆ, ರಾಜಕೀಯ ಚರ್ಚೆ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ನಾಯಕರು, ಅದರಲ್ಲೂ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದ್ದರೂ ರಾಜ್ಯ ಬಿಜೆಪಿ ನಾಯಕರು ಮೌನವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಂದು ಬಾರಿ ಸಿದ್ದರಾಮಯ್ಯ ಪರ ಮತ್ತೊಮ್ಮೆ ಡಿ.ಕೆ.ಶಿವಕುಮಾರ್ ಪರ ಹೇಳಿಕೆ ನೀಡುತ್ತಾ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದ ಅವರು, ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಸಿದ್ಧತೆ ನಡೆಸಿದ್ದಾರೆ. ನೀವಿನ್ನೂ (ರಾಜ್ಯ ಬಿಜೆಪಿ ನಾಯಕರು) ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಸುತ್ತಲೇ ಸುತ್ತುತ್ತಿದ್ದೀರಿ ಎಂದು ಸಚಿವರು ವ್ಯಂಗ್ಯವಾಡಿದರು.
ಪ್ರಿಯಾಂಕ್ ಮಾತಿಗೆ ಧ್ವನಿಗೂಡಿಸಿದ ಡಿ.ಕೆ.ಶಿವಕುಮಾರ್, ‘ಬಿಜೆಪಿಯಲ್ಲಿರುವ ನನ್ನ ಕೆಲವು ಸ್ನೇಹಿತರಿಗೆ ನನ್ನನ್ನು ಸ್ಮರಿಸದಿದ್ದರೆ ಅವರಿಗೆ ಸಮಾಧಾನವಿಲ್ಲ, ನಿದ್ದೆಯು ಬರುವುದಿಲ್ಲ, ಸಂತೋಷ ಆಗುವುದಿಲ್ಲ, ಸ್ಫೂರ್ತಿ ಬರುವುದಿಲ್ಲ. ಹೀಗಾಗಿ ನನ್ನ ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ. ಅವರಿಗೆ ಬಜೆಟ್ ವಿರುದ್ಧವಾಗಿ ಮಾತನಾಡಲು ಏನು ಇಲ್ಲದ ಕಾರಣ ನನ್ನ ವಿಚಾರ ಎತ್ತಿ ಮಾತನಾಡುತ್ತಾರೆ. ಮಾತನಾಡಲಿ, ಖುಷಿಪಡಲಿ ಎಂದು ತಿಳಿಸಿದರು.







